ಮಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅದೊಂದು ಕಾಯಿಲೆ ಮಕ್ಕಳನ್ನು ವೇಗವಾಗಿ ಆವರಿಸಿಕೊಳ್ಳುತ್ತಿದೆ. ಪ್ರಪಂಚದ ಪ್ರತಿ ಮೂರನೇ ಮಗು ಈ ಕಾಯಿಲೆಗೆ ತುತ್ತಾಗುತ್ತಿದೆ ಎಂದು ಬ್ರಿಟೀಷ್ ಜರ್ನಲ್ ಆಫ್ ಐಸೈನ್ಸ್ ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ 2050ರ ವೇಳೆ ಸುಮಾರು 40% ಮಕ್ಕಳು ಈ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಮಕ್ಕಳು ತುಂಬಾ ಸೂಕ್ಷ್ಮವಾಗಿರುವ ಕಾರಣ ಅವರು ಸುಲಭವಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಣ್ಣಿನ ಸಂಬಂಧಿತ ಈ ಕಾಯಿಲೆ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಿಸುತ್ತಿದ್ದು, ಸಮೀಪ ದೃಷ್ಟಿ ದೋಷಕ್ಕೆ ಒಳಗಾಗುತ್ತಿದ್ದಾರೆ. ಸಮೀಪ ದೃಷ್ಟಿ ದೋಷಕ್ಕೆ ಒಳಗಾದ ಮಕ್ಕಳಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲವಾದ್ರೂ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಕನ್ನಡಕದ ಅವಶ್ಯತೆ ಹೆಚ್ಚಾಗುತ್ತಿದೆ. ಈ ಮಕ್ಕಳಿಗೆ ಶಾಲೆ ಬೋರ್ಡ್, ರಸ್ತೆಯ ಸೈನ್ ಬೋರ್ಡ್ ಹಾಗೂ ಟಿವಿ ವೀಕ್ಷಣೆಗೆ ಕನ್ನಡಕ ಬೇಕೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಕಾಯಿಲೆಯ ಲಕ್ಷಣ ನಿಮ್ಮ ಮಕ್ಕಳಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ :
ಮಕ್ಕಳು ದೂರದ ವಸ್ತುಗಳನ್ನು ನೋಡಲು ಕಷ್ಟ ಪಡುವುದು, ಕಣ್ಣುಗಳು ಆಯಾಸಗೊಳ್ಳುವುದು, ಒತ್ತಡದ ಅನುಭವ ಆಗುವುದು, ವಿಷಯದಲ್ಲಿ ಗಮನ ಹರಿಸಲಾಗದೇ ಇರುವುದು, ನಿರಂತರ ತಲೆ ನೋವು ಮುಂತಾದ ಲಕ್ಷಣಗಳು ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹತ್ತು ವರ್ಷದ ಮಕ್ಕಳಲ್ಲಿ ಈ ರೀತಿಯ ಗುಣಲಕ್ಷಣ ಕಾಣಿಸುವುದು ಒಳ್ಳೆಯ ಲಕ್ಷಣ ಅಲ್ಲ. ಮಕ್ಕಳು ಮೊಬೈಲ್ ಪರದೆಗಳನ್ನು ನಿರಂತರ ನೋಡುತ್ತಿದ್ದರೆ ಅದನ್ನು ನಿಲ್ಲಿಸುವ ಪ್ರಯತ್ನ ಮಾಡುವುದು ಪೋಷಕರ ಜವಾಬ್ದಾರಿ. ಮೊಬೈಲ್‌ನಲ್ಲಿ ಕಾರ್ಟೂನ್ ನೋಡುವುದು ಕೂಡಾ ಮಕ್ಕಳ ಕಣ್ಣುಗಳ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಮಾಡುತ್ತದೆ.
ಇದನ್ನೂ ಓದಿ: ಮಕ್ಕಳು ಓದಲ್ಲ ಅಂತ ಬೈಬೇಡಿ; ಜಸ್ಟ್ ಹೀಗೆ ಮಾಡಿ ಸಾಕು !!
ಸಮೀಪದೃಷ್ಟಿಯ ದೊಡ್ಡ ಕಾರಣಗಳು ಇವು :
1. ನ್ಯಾಷನಲ್ ಐ ಇನ್ಸ್ಟಿಟ್ಯೂಟ್ ಪ್ರಕಾರ, ಸಮೀಪದೃಷ್ಟಿ ಸಾಮಾನ್ಯವಾಗಿ 6 ರಿಂದ 14 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ ಮತ್ತು ಅದರ ರೋಗಲಕ್ಷಣಗಳು 20 ನೇ ವಯಸ್ಸಿನಲ್ಲಿ ಉಲ್ಬಣಗೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣ ಮೊಬೈಲ್ ವೀಕ್ಷಣೆ
2. ಮಧುಮೇಹ ಕಾಯಿಲೆ ಇದ್ದಲ್ಲಿಯೂ ಇದು ಸಮೀಪ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ದೊಡ್ಡವರಲ್ಲಿ ಬಹುತೇಕ ಈ ಕಾಯಿಲೆಗೆ ಮಧುಮೇಹ ಕಾರಣವಾಗುತ್ತದೆ.
3. ದೃಷ್ಟಿ ಒತ್ತಡ, ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ನಿರಂತರ ಸಮಯವನ್ನು ಕಳೆಯುವುದರಿಂದ ಸಮೀಪದೃಷ್ಟಿ ಉಂಟಾಗುತ್ತದೆ.
4. ಕುಟುಂಬದ ಇತಿಹಾಸ ಅಂದರೆ ಆನುವಂಶಿಕ ಸ್ಥಿತಿ ಕೂಡ ಸಮೀಪದೃಷ್ಟಿಗೆ ಕಾರಣವಾಗಬಹುದು.
ಸಮೀಪದೃಷ್ಟಿಯಿಂದ ಮಕ್ಕಳ ಕಣ್ಣುಗಳನ್ನು ಹೇಗೆ ರಕ್ಷಿಸುವುದು :
1. ಹೊರಾಂಗಣ ಚಟುವಟಿಕೆಗಳನ್ನು ಹೆಚ್ಚಿಸಿ. 2. ಮಕ್ಕಳನ್ನು ಹಸಿರು ಸ್ಥಳಗಳಿಗೆ ಕರೆದೊಯ್ಯಿರಿ. 3. ಮೊಬೈಲ್ ನೋಡುವ ಸಮಯವನ್ನು ಕಡಿಮೆ ಮಾಡಿ. 4. ಅಧ್ಯಯನದ ನಡುವೆ ವಿರಾಮಗಳನ್ನು ತೆಗೆದುಕೊಳ್ಳಲು ಹೇಳಿ. 5. ಸ್ಕ್ರೀನ್ ಅಥವಾ ಪುಸ್ತಕವನ್ನು ತುಂಬಾ ಹತ್ತಿರದಿಂದ ನೋಡಲು ಬಿಡಬೇಡಿ. 6. ಪರದೆಯ ಮುಂದೆ ಆಂಟಿಗ್ಲೇರ್ ಅಥವಾ ನೀಲಿ ಬಣ್ಣದ ಕನ್ನಡಕವನ್ನು ಧರಿಸಿ. 7. ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ.
ಗಮನಿಸಿ :ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು.