ಮಕ್ಕಳು ಏನೇ ವಿಷಯಗಳಿದ್ದರೂ ಅದನ್ನು ತಂದೆ – ತಾಯಿಯ ಬಳಿ ಹೇಳಲು ಬಯಸುತ್ತಾರೆ. ಆದರೆ, ಹೀಗೆ ಹೇಳಲು ಬಂದ ಮಕ್ಕಳ ಮೇಲೆ ಕೆಲವೊಮ್ಮೆ ಪೋಷಕರು ರೇಗುವುದುಂಟು. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದೆ ಮಾಡುವ ಈ ತಪ್ಪು ಮುಂದೆ ಪೋಷಕರಿಗೇ ಸಮಸ್ಯೆಯಾಗಬಹುದು.
ಅಮ್ಮನ ಅಡುಗೆ ರುಚಿಯ ವಿಚಾರ ಇರಬಹುದು, ಸಹೋದರ ಸಹೋದರಿಯರ ನಡುವಿನ ಜಗಳ ಇರಬಹುದು, ಶಾಲೆಯಲ್ಲಿ ನಡೆದಿರುವ ಅದ್ಯಾವುದೋ ಸಂತಸದ ಅಥವಾ ಬೇಸರದ ಸಂಗತಿ ಇರಬಹುದು, ಪೋಷಕರು ವ್ಯವಧಾನದಿಂದ ಕೇಳಿಸಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳು ಅದೇನೋ ಹೇಳಲು ಬಂದಾಗ ಅಸಹನೆ, ಸಿಟ್ಟು ಪ್ರದರ್ಶಿಸಿದರೆ ಮಕ್ಕಳ ಮೃದು ಮನಸಿಗೆ ಘಾಸಿ ಉಂಟಾಗುವ ಅಪಾಯ ಇದೆ. ಇದು ಪೋಷಕರನ್ನು ಮೆಚ್ಚಿಸಲು ಅಥವಾ ಗಮನವನ್ನು ತಮ್ಮತ್ತ ಸೆಳೆಯಲು ಮಕ್ಕಳು ಸುಳ್ಳಿನ ದಾರಿ ಹಿಡಿಯಲು ಅವಕಾಶ ಮಾಡಿಕೊಡುವ ಅಪಾಯ ಇದೆ.
ಇನ್ನು ಮಕ್ಕಳೇನೋ ಮಾಡಬೇಕು ಎಂಬ ತುಡಿತವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ ಗದರಿಸಿ ಸುಮ್ಮನಿರುವಂತೆ ಮಾಡುವುದು ಕೂಡ ಅವರ ಭವಿಷ್ಯವನ್ನು ಚಿವುಟಿದಂತೆ. ಇದರಿಂದ ತಮ್ಮ ಕನಸನ್ನು ಪೋಷಕರು ಕಮರಿ ಹಾಕಿದ್ರು ಎಂಬ ಅಸಮಾಧಾನ ಮಕ್ಕಳ ಮನಸಿನ ಮೂಲೆಯಲ್ಲಿ ಕೂತು ಬಿಡುತ್ತದೆ. ಇದು ಮುಂದೆ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಪೋಷಕರು ತಮಗೇನು ಮಾಡಿಲ್ಲ ಎಂಬ ಭಾವ ಮೂಡಿಸುವ ಸಾಧ್ಯತೆ ಕೂಡ ಇದೆ. ತಾನು ಮಾಡಬೇಕು ಅಂದುಕೊಂಡಿದ್ದನ್ನು ಮನೆಯಲ್ಲಿ ಸುಳ್ಳು ಹೇಳಿ ಮಾಡಲು ಆರಂಭಿಸಿ ಮುಂದೆ ಸುಳ್ಳು ಹೇಳುವುದನ್ನೇ ಮೈಗೂಡಿಸುವ ಮನಸ್ಥಿತಿಗೆ ಮಕ್ಕಳು ಬರಬಹುದು.
ಹುಟ್ಟಿದ ಮಗುವಿನ ಲಾಲನೆ ಪಾಲನೆ ಮಾಡುವ ಪೋಷಕರು ಮಗುವಿಗೆ ನಡೆಯುವುದರಿಂದ ಹಿಡಿದು ಮಾತನಾಡುವುದು, ತಿನ್ನುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಕೆಲವೊಂದು ಬಾರಿ ಮಕ್ಕಳು ಕೇಳುವ ಪ್ರಶ್ನೆಗಳು, ಮಾಡುವ ಹಠಗಳು, ಹಾಗೂ ಅವರ ಬೇಡಿಕೆಗಳು ಕಿರಿಕಿರಿ ಅನಿಸಿ ಬಿಡುತ್ತದೆ. ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುವುದು ಪೋಷಕರಿಗೆ ಗೊತ್ತಿರುತ್ತದೆಯಾದ್ರೂ ಕೆಲವೊಂದು ವಿಚಾರವನ್ನು ಮಕ್ಕಳಿಗೆ ನವಿರಾಗಿ ವಿವರಿಸಿ ಅರ್ಥೈಸಬೇಕು. ಆದ್ರೆ, ಎಲ್ಲವನ್ನೂ ನವಿರಾಗಿ ನಿರಾಕರಿಸುತ್ತಾ ಹೋದರೆ ನನ್ನ ಹೆತ್ತವರು ನನಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವ ಮಕ್ಕಳಲ್ಲಿ ಮೂಡಬಹುದು. ತಮ್ಮ ಕನಸಿಗೆ ಪೋಷಕರೇ ಅಡ್ಡಿ ಎಂಬ ಸಣ್ಣದೊಂದು ಅಸಹನೆ ಇಲ್ಲಿಂದಲೇ ಆರಂಭವಾಗಬಹುದು.
ಸಣ್ಣ ಪ್ರಾಯದಲ್ಲಿ ಮಕ್ಕಳು ದೂರು ಹೇಳುವ ಪ್ರಮುಖ ಕಾರಣಗಳು :
ಗಮನವನ್ನು ತನ್ನತ್ತ ಸೆಳೆಯಲು:
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು, ಒಬ್ಬರ ಕಡೆ ಹೆಚ್ಚಿನ ಗಮನ ನೀಡುತ್ತಾರೆ ಅಂತ ಮಗುವಿನ ಮನಸಿನಲ್ಲಿ ಮೂಡಿದಾಗ ಗಮನ ತನ್ನತ್ತ ಸೆಳೆಯಲು ಸುಳ್ಳು ದೂರುಗಳನ್ನು ಹೇಳಲು ಆರಂಭಿಸುತ್ತಾರೆ. ಇದು ಶಾಲೆಯಲ್ಲೂ , ಕುಟುಂಬ ಸದಸ್ಯರ ಮುಂದೆಯೂ ನಡೆಯುವ ಮೂಲಕ ಪೋಷಕರನ್ನು ಮುಜುಗರಕ್ಕೆ ಸಿಲುಕಿಸಬಹುದು. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳು ಸಣ್ಣ ಸಣ್ಣ ವಿಚಾರಗಳಲ್ಲೂ ಜಗಳ ಆಡುವುದು, ಸುಳ್ಳು ಹೇಳುವುದು ಮಾಡಬಹುದು. ಇಂತಹ ವಿಚಾರ ಬಂದಾಗ ಮಕ್ಕಳ ಜಗಳವನ್ನು ನಾಜೂಕಾಗಿ ಪರಿಹರಿಸಬೇಕು.
ಅಸಹನೆ , ಸಿಟ್ಟು, ಜಗಳ , ದೂರುಗಳು ಇವುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಮಕ್ಕಳು ಪದೇಪದೇ ಸಿಟ್ಟಾಗುವುದು, ಅಸಹನೆಯಿಂದ ಒಂಟಿಯಾಗಿ ಕೂರುವುದು, ಸ್ನೇಹಿತರ ಜೊತೆ ಜಗಳ ಮಾಡುವುದು, ದೂರುಗಳನ್ನು ಹೇಳಿಕೊಂಡು ಬರುತ್ತಾರೆ ಅಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಯಾಕಾಗಿ ಹೀಗೆ ಎಂಬುವುದನ್ನು ಮೊದಲು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಿ. ಪೋಷಕರಾಗಿ ತಮ್ಮಿಂದೇನು ತಪ್ಪಾಗಿಲ್ಲ ಎಂದರೆ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ.