ಸುರತ್ಕಲ್: ಬಂಟರ ಸಂಘ ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಬಂಟರ ಭವನದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಕೆ.ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಸಸಿ ವಿತರಣೆ ಬರೀ ಕಾಟಾಚಾರದ ಕಾರ್ಯಕ್ರಮವಾಗಬಾರದು. ಮನೆಗೆ ಕೊಂಡೊಯ್ದ ಗಿಡವನ್ನು ಮಕ್ಕಳ ಕೈಯಲ್ಲಿ ನೆಡುವಂತೆ ಸಲಹೆ ನೀಡಬೇಕು. ಇದರಿಂದ ಅವರಿಗೂ ಪ್ರಕೃತಿ ಮತ್ತು ಪರಿಸರ ರಕ್ಷಣೆಯ ಕಾಳಜಿ ಮತ್ತು ಪ್ರೀತಿ ಬೆಳೆಯುತ್ತದೆ. ಯಾವ ಗಿಡವೂ ಸಾಯದಂತೆ ನೋಡಿಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿರುವ ಈ ವೇಳೆಯಲ್ಲಿ ಇದೊಂದು ಸಾರ್ಥಕ ಕಾರ್ಯಕ್ರಮವಾಗಿದೆ. ಸ್ವಚ್ಛ ಪರಿಸರ ಇದ್ದಲ್ಲಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯ. ಎಲ್ಲರೂ ಈ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದರು.
ದಿಕ್ಸೂಚಿ ಮಾತನ್ನಾಡಿದ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿರುತ್ತದೆ. ಇಂದಿನ ಈ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಹಣ್ಣುಗಳ ಗಿಡಗಳನ್ನು ನೆಡುವ ಮೂಲಕ ಪ್ರಾಣಿ ಪಕ್ಷಿಗಳ ಬದುಕಿಗೆ ನಾವು ಸಹಕಾರ ನೀಡಿದಂತಾಗುತ್ತದೆ. ಇದರಿಂದ ಅವುಗಳು ಬೆಳೆ ನಾಶ ಮಾಡುವುದಿಲ್ಲ. ಇಂತಹ ಕಾರ್ಯಕ್ರಗಳು ಹೆಚ್ಚೆಚ್ಚು ನಡೆಯುವ ಮೂಲಕ ಪರಿಸರಸ್ನೇಹಿಗಳಾಗಿ ಬದುಕೋಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಸುರತ್ಕಲ್ ನ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ, ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ, ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದರ ಅಧ್ಯಕ್ಷ ರಮೇಶ್ ಶೆಟ್ಟಿ, ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಮಾಜಿ ಯೋಧ ಜೆಡಬ್ಲ್ಯೂ ಮಹಾಬಲ ಭಂಡಾರಿ, ಅರಣ್ಯ ಇಲಾಖೆ ಎಸಿಎಫ್ಓ ಪಿ. ಶ್ರೀಧರ್, ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ಅಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಮೂಡಬಿದ್ರಿಯ ಸಸ್ಯ ಸಾಮ್ರಾಜ್ನಿ ಅಸ್ಮಭಾನು, ಸಮಾಜ ಸೇವಕ ಸತೀಶ್ ಸದಾನಂದ, ಕೃಷಿಕ ಸತೀಶ್ ಎಂ ಶೆಟ್ಟಿ ಪಂಜ ಬೈಲಗುತ್ತು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಹರೀಶ್ ಶೆಟ್ಟಿ ಇಡ್ಯ ವಂದಿಸಿದರು. ಅರ್ಪಿತಾ ಶಿಶಿರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು : ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.
ಮಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.
ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ ರಾಡಾರ್ ಈಗ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ (KSNDMC) ಆಯೋಜಿಸಲಾದ ಕಾರ್ಯಾಗಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಹವಾಮಾನ ವಿಭಾಗದ ಕೊಡುಗೆಗಳೊಂದಿಗೆ ಹಲವಾರು ಟೆಕ್ನಿಕಲ್ ಸೆಷನ್ಸ್ ಗಳನ್ನು ಒಳಗೊಂಡಿತ್ತು.
ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ S-ಬ್ಯಾಂಡ್ DWR ಅನ್ನು ಸ್ಥಾಪಿಸುವಲ್ಲಿ ಐಎಂಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪುವಿಯರಸನ್ ಚರ್ಚಿಸಿದರು. ಯೋಜನೆಯು ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ ಐಎಂಡಿಗೆ ಟವರ್ ಮತ್ತು ಯುಟಿಲಿಟಿ ಕೋಣೆಗೆ 30×30 ಮೀಟರ್ ಪ್ಲಾಟ್ ಅಗತ್ಯವಿದೆ ಎಂದು ವಿವರಿಸಿದರು.
ಕದ್ರಿ ಬಳಿ ಸ್ಥಾಪಿಸಲಾಗುತ್ತಿರುವ ಮಂಗಳೂರು ರಾಡಾರ್ 250-300 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ ಮತ್ತು ಭಾಗಮಂಡಲ ಸೇರಿದಂತೆ ಮಾನ್ಸೂನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕರ್ನಾಟಕದ ಪ್ರದೇಶಗಳಿಗೆ ವರ್ಧಿತ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಪುವಿಯರಸನ್ ಅವರು ಧಾರವಾಡದಲ್ಲಿ X-ಬ್ಯಾಂಡ್ DWR ಯೋಜನೆಗಳನ್ನು ಮತ್ತು ಹೊನ್ನಾವರದಲ್ಲಿ S-ಬ್ಯಾಂಡ್ ರಾಡಾರ್‌ಗಳು ಮತ್ತು ಬಳ್ಳಾರಿಯಲ್ಲಿ C-ಬ್ಯಾಂಡ್ ರಾಡಾರ್‌ಗಳ ಪ್ರಸ್ತಾಪವನ್ನು ಪ್ರಸ್ತಾಪಿಸಿದರು.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ. ಈ ಹಿನ್ನೆಲೆ ಕರ್ನಾಟಕವು ನಿಖರ ಹವಾಮಾನ ಮುನ್ಸೂಚನೆಗಾಗಿ ಗೋವಾ, ಹೈದರಾಬಾದ್, ಚೆನ್ನೈಯ ರಾಡಾರ್‌ಗಳನ್ನು ಅವಲಂಬಿಸಿದೆ.
ಕಾರ್ಯಾಗಾರದಲ್ಲಿ KSNDMC ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್ ಅವರು ಕರ್ನಾಟಕದ ನೈಸರ್ಗಿಕ ವಿಕೋಪಗಳ ದುರ್ಬಲತೆಯನ್ನು ಚರ್ಚಿಸಿದರು. ರಾಜ್ಯದಲ್ಲಿ ಶೇ.80ರಷ್ಟು ಬರಪೀಡಿತವಾಗಿದ್ದು, ಕಳೆದ 23 ವರ್ಷಗಳಲ್ಲಿ 16 ವರ್ಷ ಬರಗಾಲಕ್ಕೆ ತುತ್ತಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಭೂಕುಸಿತದಿಂದ ವ್ಯಾಪಕ ಹಾನಿ ಉಂಟಾಗಿದೆ. 2018 ರಿಂದ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭೂಕುಸಿತಗಳು ಸಂಭವಿಸಿವೆ ಎಂದರು.
ಮಂಗಳೂರು : ಆಟದ ಪಿಸ್ತೂಲ್ ಎಂದು ಭಾವಿಸಿ ಟೇಬಲ್ ಮೇಲಿದ್ದ ರಿಯಲ್ ರಿವಾಲ್ವರ್ ಎತ್ತಿಕೊಂಡು ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಗಳೂರಿನ ಹೊರವಲಯ ವಾಮಂಜೂರು ಬಳಿ ಈ ಘಟನೆ ನಡೆದಿದೆ. ಗಾಯಾಳು ಹೆಸರು ಸಫ್ವಾನ್ ಎಂಬ ಮಾಹಿತಿ ಲಭ್ಯವಾಗಿದೆ.
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ಜನವರಿ 6 ರಂದು ಈ ಘಟನೆ ನಡೆದಿದ್ದು, ಸೆಕೆಂಡ್ ಹ್ಯಾಂಡ್ ಐಟಂ ಖರೀದಿ ಮಾಡಲು ಈತ ಅಂಗಡಿಯೊಂದಕ್ಕೆ ಬಂದಿದ್ದ. ಭಾಸ್ಕರ್ ಎಂಬವರು ಅಂಗಡಿಯ ಟೇಬಲ್ ಮೇಲೆ ರಿವಾಲ್ವರ್ ಇರಿಸಿ ಒಳಗೆ ಹೋದ ಸಂದರ್ಭದಲ್ಲಿ ಸಫ್ವಾನ್ ರಿವಾಲ್ವಾರ್ ಕೈಗೆತ್ತಿಕೊಂಡಿದ್ದಾನೆ.
ಆಟದ ಪಿಸ್ತೂಲ್ ಇರಬೇಕು ಎಂದು ಅದನ್ನು ಕೈನಲ್ಲಿ ಹಿಡಿದು ತಮಾಷೆಗೆ ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ್ದಾನೆ. ರಿವಾಲ್ವರ್ ನಿಂದ ಸಿಡಿದ ಗುಂ*ಡು ಆತನ ಹೊಟ್ಟೆಗೆ ನುಸುಳಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.