ಉಡುಪಿ: ‘ಕೊಲ್ಲೂರು ಕ್ಷೇತ್ರದ ಸಲಾಂ ಮಂಗಳಾರತಿ ರದ್ದು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಒಂದು ಕೋಮುವಾದ ನಡೆ, ಟಿಪ್ಪು ತನ್ನ ರಾಜ್ಯಭಾರದ ಅವಧಿಯಲ್ಲಿ 150ಕ್ಕೂ ಅಧಿಕ ದೇವಸ್ಥಾನಗಳಿಗೆ ಅನುದಾನ ನೀಡಿದ್ದರು.
ಹಾಗೆಯೇ ಪೇಶ್ವೆಗಳ ದಾಳಿಯಿಂದ ಶಾರದಾಂಬ ದೇವಸ್ಥಾನವನ್ನು ಕೂಡ ರಕ್ಷಿಸಿದ್ದರು. ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಇತಿಹಾಸ ತಿರುಚುವುದು ಸರಿಯಲ್ಲ’ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಹೇಳಿದ್ದಾರೆ.
ಈ ಬಗ್ಗೆ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟಿಪ್ಪು ಮಹಾನ್ ದೂರದೃಷ್ಟಿಯಿದ್ದ ಆಡಳಿತಗಾರ, ರಾಜಕಾರಣಿ ಹೇಗಿರಬೇಕು ಅನ್ನುವುದಕ್ಕೆ ಟಿಪ್ಪು ಸುಲ್ತಾನ್ ನಿದರ್ಶನ.
ಟಿಪ್ಪುಸುಲ್ತಾನ್ ಅಂತಹ ದೂರದೃಷ್ಟಿ ಇರುವ ರಾಜನ ಪಾಠಗಳನ್ನು ಮಕ್ಕಳಿಗೆ ಶಾಲೆಯಲ್ಲಿ ಕಳಿಸಬೇಕು.
ಒಬ್ಬ ರಾಜ ಅಂದ್ರೆ ಹೇಗೆ ಇರಬೇಕು ಅಂತಹ ತೋರಿಸಿಕೊಟ್ಟ ಮಹಾನ್ ನಾಯಕ ಅವನು. ಅವರಿದ್ದ ಕಾಲಘಟ್ಟದಲ್ಲಿ ಸುಮಾರು 3500 ಕೆರೆಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.
ಆದರೆ ಈಗಿರುವ ರಾಜ್ಯ ಸರ್ಕಾರಕ್ಕೆ ಕೆರೆಯ ಹೂಳು ತೆಗೆಯಲು ಕೂಡ ಕಷ್ಟವಾಗುತ್ತಿದೆ’ ಎಂದರು.
ರಾಜ್ಯಸರ್ಕಾರದ ನಡೆ ಕೋಮುವಾದವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಅವರು ‘ದಲಿತರಿಗೆ, ಹಿಂದುಳಿದವರಿಗೆ ಭೂಮಿ ದೊರಕಿಸಿದ ರಾಜ ಅಂದರೆ ಅದು ಟಿಪ್ಪು, ಅಂದಿನ ಕಾಲದಲ್ಲಿದ್ದ ಅನಿಷ್ಠ ಪದ್ಧತಿಯಾದ ಶೂದ್ರ ಹೆಣ್ಣು ಮಕ್ಕಳ ಸ್ತನ ತೆರಿಗೆ ತೆರವು ಮಾಡಿದ ರಾಜ ಎಂಬ ಹಿರಿಮೆಗೆ ಟಿಪ್ಪು ಸುಲ್ತಾನ್ ಪಾತ್ರರಾಗುತ್ತಾರೆ. ಮದ್ಯಪಾನ ನಿಷೇಧವನ್ನು ಮಾಡಿದ ರಾಜ.
ಟಿಪ್ಪುವಿನ ಸಾಧನೆಗಳೇ ಅತಿದೊಡ್ಡ ಇತಿಹಾಸ. ಹೀಗಿರುವಾಗ ಟಿಪ್ಪುವಿನ ಕೊಡುಗೆಗಳು ನಮ್ಮ ಶಾಲಾ ಮಕ್ಕಳಿಗೆ ತಿಳಿಯಬೇಕು. ಆದರೆ ಮುಸ್ಲಿಂ ರಾಜ ಎಂಬ ಕಾರಣಕ್ಕೆ ಬಿಜೆಪಿ ಪಠ್ಯದಿಂದ ತೆಗೆಯಲು ಹೊರಟಿದೆ’ ಎಂದು ಹೇಳಿದರು.
ಶಾಸಕ ರಘುಪತಿ ಭಟ್‌ಗೆ ಓಪನ್ ಚಾಲೆಂಜ್
ಮಾಧ್ಯಮದವರು ಉಡುಪಿಯಲ್ಲಿ ಅನಧಿಕೃತ ಎಂದು ಪರಿಗಣಿಸಿದ ಜಾಮೀಯಾ ಮಸೀದಿ ಕಟ್ಟಡದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಜಾಮೀಯಾ ಮಸೀದಿ ಕಟ್ಟಡ ಅನಧಿಕೃತ ಎಂದು ಅದು ಯಾವ ರೀತಿ ಹೇಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.
ಏಕೆಂದರೆ ನಗರಸಭೆಯವರು ಇದೇ ಕಟ್ಟಡಕ್ಕೆ ‘ಲೈಸೆನ್ಸ್ ಕೊಟ್ಟಿದ್ದೀರಿ, ಟ್ಯಾಕ್ಸ್ ಕೂಡ ಪಡೆದುಕೊಂಡಿದ್ದೀರಿ.
ಎಲ್ಲವನ್ನು ಪಡೆದುಕೊಂಡು ಅದನ್ನು ಹೆಚ್ಚುವರಿ ಪೆನಾಲ್ಟಿ ಹಾಕಿಸಿ ಸಕ್ರಮ ಮಾಡುವ ಅವಕಾಶ ಪುರಸಬೆಗೆ ಇತ್ತು.
ಆದರೂ ಕೂಡ ದ್ವೇಷದ ರಾಜಕೀಯಕ್ಕೆ ಉಡುಪಿಯ ಒಂದು ಮಸೀದಿ ಬಲಿ ಮಾಡಿರುವುದು ದುರಂತ. ನಗರಸಭೆಗೆ ನಿಜವಾದ ಬದ್ಧತೆ ಇದ್ದರೆ ಈ ಮಸೀದಿ ಮಾತ್ರ ಅನಧಿಕೃತವಾಗಿರುವುದಾ ಅಥವಾ ಬೇರೆ ಕೂಡ ಇದೆಯಾ ಎಂಬ ಪ್ರಶ್ನೆಗೆ ಉತ್ತರ ನೀಡಲಿ.
ನಾನು ಉಡುಪಿ ಎಮ್‌ಎಲ್‌ಎ ರಘುಪತಿ ಭಟ್‌ಗೆ ಓಪನ್ ಚಾಲೆಂಜ್ ಮಾಡುತ್ತೇನೆ ಈ ಜಮೀಯಾ ಮಸೀದಿ ಬಿಟ್ಟು ಬೇರೆ ಯಾವುದೇ ಕಟ್ಟಡ ಇಲ್ಲಿ ಅನಧಿಕೃತ ಇಲ್ಲ ಎಂದು ಸಾಕ್ಷಿ ಸಮೇತ ತೋರಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಬರಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವ ವಿಚಾರದ ಕುರಿತು ಮಾತನಾಡಿದ ಅವರು ‘ಶಬರಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಮಾಡಲು ಅವಕಾಶ ಇದೆ’ ಎಂದು ಸುಪ್ರೀಂ ಕೋರ್ಟಿನ ಪಂಚಪೀಠದಿಂದ ಒಂದು ತೀರ್ಪು ಬಂದಿತ್ತು.
ಆದರೆ ಈ ತೀರ್ಪನ್ನು ವಿರೋಧಿಸಿದ ಬಿಜೆಪಿ ಸರ್ಕಾರ ಹಾಗೂ ಸಂಘ ಪರಿವಾರ ಕೇರಳದಲ್ಲಿ. ಪೊಲೀಸ್ ಸ್ಟೇಷನ್‌ಗೆ ಬಾಂಬು ಎಸೆದರು, ಬಸ್‌ಗಳನ್ನು ಸುಟ್ಟು ಹಾಕಿದ್ದರು, ಪತ್ರಕರ್ತರ ಮೇಲೆ ಕೂಡ ಹಲ್ಲೆ ಮಾಡಿದ್ದರು.
ಈ ರೀತಿ ವರ್ತನೆ ಮಾಡಿದವರು ನಮಗೆ ಕರ್ನಾಟಕದಲ್ಲಿ ಪಾಠ ಮಾಡಲು ಬರುತ್ತೀರಾ? ನಮಗೆ ಅದರ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.