ಮಂಗಳೂರು:ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತೀ ಬಾರಿಯೂ ಜಿಲ್ಲಾವಾರು ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕಾಗಿ ನೇರಾ-ನೇರಾ ಪೈಪೋಟಿ ನಡೆಸುತ್ತಿದ್ದ ದಕ್ಷಿಣ ಕನ್ನಡ 20ನೇ ಸ್ಥಾನಕ್ಕೆ ಕುಸಿದರೆ ಉಡುಪಿ ಜಿಲ್ಲೆ 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಗುಣಾತ್ಮಕ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ವಿಭಾಗವನ್ನು ಹೊರತು ಪಡಿಸಿ ರಾಜ್ಯದ ಎಲ್ಲಾ ವಿಭಾಗಕ್ಕೆ ಎ ಗ್ರೇಡ್ ಫಲಿತಾಂಶ ದೊರಕಿದೆ.
ಆದ್ರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗುತ್ತಿದ್ದು, ಇದಕ್ಕೆ ತಕ್ಕಂತೆ ಹಲವರು ಫಲಿತಾಂಶ ಕುಸಿತಕ್ಕೆ ತಮ್ಮದೇ ವಾಖ್ಯಾನ ನೀಡುತ್ತಿದ್ದಾರೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ ಮತ್ತು ಉಡುಪಿಯಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಜೊತೆಗೆ ಯಾವುದೇ ಗೋಲ್‌ಮಾಲ್ ಇಲ್ಲದೇ ಪರೀಕ್ಷೆಯೂ ಸುಸೂತ್ರವಾಗಿ ನಡೆಯುತ್ತಿದೆ.
ಅವಿಭಜಿತ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಬೇರೆ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಗಮನವನ್ನು ಪೋಷಕರ ಸಹಿತ ಶಿಕ್ಷಕರು ನೀಡುತ್ತಾರೆ. ಆದರೆ ಈ ಬಾರಿಯ ಫಲಿತಾಂಶದಿಂದ ಪೋಷಕ ಹಾಗೂ ಶಿಕ್ಷಕ ವರ್ಗಕ್ಕೆ ತೀವ್ರ ನಿರಾಶೆ ಉಂಟಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ
ಕರಾವಳಿಯಲ್ಲಿ ಧರ್ಮ ದಂಗಲ್ ಅನ್ನು ಶಾಲಾ-ಕಾಲೇಜಿಗೆ ಹಂಚಿದ ಪರಿಣಾಮ ಈ ರೀತಿಯ ಫಲಿತಾಂಶ ಕುಸಿತ ಕಂಡಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಕೊನೆಯ ಸ್ಥಾನಗಳಲ್ಲಿ ಇರುತ್ತಿದ್ದ “ಘಟ್ಟದ” ಜಿಲ್ಲೆಗಳು ಮೇಲ್ಗಡೆ ಏರಿ ಕರಾವಳಿಯ “ಬುದ್ದಿವಂತರನ್ನು” ಅಣಕಿಸುತ್ತಿವೆ. ಕೋಮುವಾದ, ಮತೀಯ ವಿಭಜನೆಯ ರಾಜಕಾರಣ ಪ್ರಾಥಮಿಕ ಹಂತದ ತರಗತಿಯ ಒಳಗಡೆಗೂ ತಲುಪಿಸಿದರ ಪರಿಣಾಮ ಇದು. ಇದು ಇಷ್ಟಕ್ಕೇ ನಿಲ್ಲಲ್ಲ. ವ್ಯಾಪಾರ, ಉದ್ಯಮ ಕ್ಷೇತ್ರವೂ ತುಳುನಾಡಿನಲ್ಲಿ ಹಳ್ಳ ಹಿಡಿಯತೊಡಗಿದೆ. ದೊಡ್ಡ ಉದ್ಯಮಿಗಳ ಬಾಯಲ್ಲಿಯೂ ಕರಾವಳಿ ಜಿಲ್ಲೆಗಳ ಸಾಮಾಜಿಕ, ರಾಜಕೀಯ ವಾತಾವರಣದ ಕುರಿತು ನಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಸಂದೇಶ ಸ್ಪಷ್ಟ ಇದೆ. ಕೂಡಿ ಬಾಳುವುದು ಅನಿವಾರ್ಯ, ಎಚ್ಚೆತ್ತು ಕೊಳ್ಳದಿದ್ದಲ್ಲಿ ವಿನಾಶ’ ಎಂದಿದ್ದಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷ, ಮುನೀರ್ ಕಾಟಿಪಳ್ಳ
ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮಗೆ ಅಧಿಕೃತವಾಗಿ ಎಸ್‌ಎಸ್‌ಎಲ್‌ಸಿ ಬೋರ್ಡ್‌ನಿಂದ ಆ ಪ್ರತಿ ಬಂದಿಲ್ಲ. ಈ ಸಂದೇಶದ ಸೃಷ್ಟಿಯ ಮೂಲ ನಮಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.