ಎರ್ರಾ ಬಿರ್ರಿ ವಾಹನ ಚಲಾಯಿಸಿ ಪೊಲೀಸರಿಗೇ ಧಮ್ಕಿ ಹಾಕಿದ ಭೂಪ ..!
ಉಡುಪಿ: ನಾನು ಆಂಧ್ರ ಸಂಸದನ ಮಗ, ನನಗೆ ಮಾಜಿ ಸಿಎಂ ಸಿದ್ದರಾಮಯ್ಯ , ಸ್ಟೇಟ್ ಪ್ರಿನ್ಸಿಪಲ್ ಸೆಕ್ರೆಟರಿ ಗೊತ್ತು ಅಂತ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯೊಬ್ಬ ಉಡುಪಿ ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿದ್ದಾನೆ.
ಉಡುಪಿ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ರಂಪಾಟ ಮಾಡ್ತಿರೋ ಯುವಕ ಮಣಿಪಾಲ ವಿ.ವಿಯ ಎಂಬಿಬಿಎಸ್ ವಿದ್ಯಾರ್ಥಿ ಅನುರಾಗ ರೆಡ್ಡಿ. ಯದ್ವಾತದ್ವಾ ಕಾರ್ ರೈಡ್ ಮಾಡುತ್ತಾ ಬಂದ ಯುವಕನನ್ನು ಸಂಚಾರಿ ಪೊಲೀಸರು ಕಲ್ಸಂಕ ಜಂಕ್ಷನ್‌ನಲ್ಲಿ ತಡೆದಿದ್ದರು.
ಈ ವೇಳೆ ಆತ ಮದ್ಯ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆ ಮಾಡಿದಾಗ ಆಲ್ಕೋಮೀಟರ್‌ನಲ್ಲಿ ಕುಡಿತದ ಪ್ರಮಾಣ 193 ತೋರಿಸಿತ್ತು. ಇದಕ್ಕಾಗಿ ದಂಡ ಕಟ್ಟುವಂತೆ ಕೇಳಿದಾಗ ‘ತಾನು ಯಾವುದೇ ಕಾರಣಕ್ಕೂ 3000 ರೂ.ಗಳಿಗಿಂತ ಹೆಚ್ಚಿನ ದಂಡ ಕಟ್ಟುವುದಿಲ್ಲ.
ನನ್ನ ಅಪ್ಪ ಆಂಧ್ರದ ಎಂಪಿ, ಆಂಧ್ರ ಸರಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ನನ್ನ ಅಪ್ಪ ಆಪ್ತಮಿತ್ರರು. ನಾನು ಅವರಿಗೆ ಕರೆ ಮಾಡುತ್ತೇನೆ.
ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ರೈಟ್ ಹ್ಯಾಂಡ್. ನೀವು ಅವರಲ್ಲಿಯೇ ಮಾತಾಡಿ’ ಎಂದು ದರ್ಪದ ಮಾತಾಡಿದ್ದಾನೆ. ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು, ಆರೋಪಿ ಅನುರಾಗ್ ರೆಡ್ಡಿಯ ಕಾರನ್ನು ಸೀಝ್ ಮಾಡಿದ್ದಾರೆ. ಅಲ್ಲದೇ ಆತನ ಮೇಲೆ ಮದ್ಯಪಾನ ಮಾಡಿ ವಾಹನ ಚಾಲನೆ, ಅತೀವೇಗದ ವಾಹನ ಚಾಲನೆ ಕೇಸ್ ಹಾಕಿದ್ದಾರೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.