ಪುತ್ತೂರು: ಇಲ್ಲಿನ ನೆಕ್ಕಿಲಾಡಿ ಗ್ರಾಮ ನಿವಾಸಿ ನಾಪತ್ತೆಯಾಗಿದ್ದು, ಈ ನಾಪತ್ತೆ ಪ್ರಕರಣದ ಹಿಂದೆ ಭಯೋತ್ಪಾದನಾ ನಂಟು ಗೋಚರಿಸಿದೆ. ಮುಂಬರುವ ನವರಾತ್ರಿ ಉತ್ಸವದಲ್ಲಿ ದೇಶಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಿದ ಭಯೋತ್ಪಾದಕರ ಪೈಕಿ ಆತನೂ ಓರ್ವನೆಂಬ ಮಾಹಿತಿ ಬಲ್ಲ ಮೂಲಗಳಿ೦ದ ಲಭಿಸಿದೆ.
ಮೂಲತಃ ಉತ್ತರ ಪ್ರದೇಶದ ನಿವಾಸಿ ಎಂದು ಹೇಳಲಾದ 48 ವರ್ಷದ ಈ ವ್ಯಕ್ತಿ ಕಳೆದ ಜುಲೈ 28 ರಿಂದ ನಾಪತ್ತೆಯಾಗಿರುವುದಾಗಿ ಆತನ ನೆಕ್ಕಿಲಾಡಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ದೂರುದಾರ ಆಕೆ 2019 ರಲ್ಲಿ ಈತನನ್ನು ಎರಡನೇ ವಿವಾಹವಾಗಿದ್ದಳು.
ಆತ ನೆಕ್ಕಿಲಾಡಿಯ ರಾಘವೇಂದ್ರ ಮಠ ಬಳಿ ಗ್ಯಾರೇಜ್ ನಡೆಸಿಕೊಂಡಿದ್ದು, ನೆಕ್ಕಿಲಾಡಿಯ ಖಾಸಗಿ ಅಪಾರ್ಟ್‌ಮೆಂಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಜು.18ರಂದು ವಾಹನಗಳ ಬಿಡಿ ಭಾಗಗಳನ್ನು ಖರೀದಿಸಲಿದೆ ಎಂದು ಬೆಂಗಳೂರಿಗೆ ಹೋಗಿದ್ದ. ಈತ ರಾತ್ರಿ ಪತ್ನಿಗೆ ಫೋನ್ ಮಾಡಿ ಮನೆಗೆ ಬರುತ್ತಿದ್ದೇನೆಂದು ತಿಳಿಸಿರುತ್ತಾನೆಂದೂ ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ದೂರಿಗೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರಿಯುತ್ತಿದ್ದಂತೆಯೇ ನಾಪತ್ತೆಯಾದ ವ್ಯಕ್ತಿ ಭಯೋತ್ಪಾದಕನೆಂಬ ಮಾಹಿತಿ ಹೊರಬಿದ್ದಿದೆ.
ದೆಹಲಿ ವಿಶೇಷ ಪೊಲೀಸ್ ತಂಡದ ವಶದಲ್ಲಿರುವ ಆರು ಭಯೋತ್ಪಾದಕರ ಪೈಕಿ ಈತನೂ ಓರ್ವನಾಗಿದ್ದಾನೆ ಎಂಬುದು ತಿಳಿದುಬಂದಿದೆ. ನೆಕ್ಕಿಲಾಡಿ ಪರಿಸರದಲ್ಲಿ ವ್ಯವಹಾರ ನಡೆಸುತ್ತಿದ್ದ ವೇಳೆ ಈತ ಹೆಚ್ಚಾಗಿ ಹಿ೦ದೂಗಳೊಂದಿಗೆ ಬೆರೆಯುತ್ತಿದ್ದ. ಈತನ ಮೊಬೈಲ್‌ನಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಕಾರ್ಯ ಚಟುವಟಿಕೆಯ ಕ್ಲಿಪ್‌ಗಳು ಹೆಚ್ಚಿದ್ದವು.
ಸ್ಥಳೀಯರಲ್ಲಿ ಸಂಘದ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸುತ್ತಾ ಆರ್‌ಎಸ್‌ಎಸ್‌ನ ಮುಸ್ಲಿಂ ಮಂಚ್ ಬಗ್ಗೆ ತನಗೆ ಒಲವು ಇದೆ ಎಂದೂ, ಅದಕ್ಕಾಗಿ ನನ್ನನ್ನೂ ಆರ್‌ಎಸ್‌ಎಸ್ ಗೆ ಸೇರಿಸಿ ಎಂದೂ ಅಂಗಲಾಚುತ್ತಿದ್ದ.
ಹಿಂದಿ ಹಾಗೂ ಉರ್ದುವನ್ನು ಸಾಮಾನ್ಯವಾಗಿ ಮಾತನಾಡುತ್ತಿದ್ದ ಈತ ನಿರ್ದಿಷ್ಟ ಪೋನ್ ಕರೆಗೆ ಮಾತ್ರ ಸ್ಥಳೀಯರು ಈ ತನಕ ಕೇಳದ ಭಾಷೆಯಲ್ಲಿ ಮಾತನಾಡುತ್ತಿದ್ದ. ಆಯ್ದ ಫೊನ್ ಕರೆಗಳಿಗೆ ಮಾತ್ರ ನಿಂತಲ್ಲಿ ನಿಲ್ಲದೇ ದಾರಿಯುದ್ದಕ್ಕೂ ಮಾತನಾಡುತ್ತಿದ್ದ.
ಒಂದು ಸಲ ಎದೆ ನೋವು ಕಾಡಿ ಅಸ್ವಸ್ಥನಾಗಿದ್ದ ಆತನನ್ನು ಸ್ನೇಹಿತರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದರು.
ಚಿಕಿತ್ಸೆ ಮುಗಿಸಿ ಬಿಲ್ ಪಾವತಿಸುವ ವೇಳೆ ತನ್ನ ಬ್ಯಾಂಕ್ ಖಾತೆಗೆ 1.75 ಲಕ್ಷ ರು. ಹಣ ಜಮೆಯಾಗಿರುವುದನ್ನು ತಿಳಿಸಿ ಆನ್‌ಲೈನ್ ಗೇಮ್‌ನಲ್ಲಿ ತಾನು ಸಂಪಾದಿಸಿದ್ದೇನೆಂದು ಉತ್ತರಿಸಿದ್ದ.
ನಾಪತ್ತೆಯಾಗುವ ಮುನ್ನ ನೆಕ್ಕಿಲಾಡಿಯಲ್ಲಿದ್ದ ಸಮಯದಲ್ಲಿ ಭಾರಿ ಮೊತ್ತದ ಹಣದ ಕಟ್ಟನ್ನು ಆತ ಹೊಂದಿರುವುದನ್ನು ಸ್ಥಳೀಯರು ಗಮನಿಸಿದ್ದರೂ ಹಣದ ಲಭ್ಯತೆ ಎಲ್ಲಿಂದ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ಆತನಿಗೆ ಮದುವೆಯನ್ನೂ ಮಾಡಿಸಿದ ಸಾರ್ವಜನಿಕರು ಆತನಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿಯೂ ನೆರವಾಗಿದ್ದರು.
ಆಯ್ದ ಫೋನ್ ಕರೆಗಳಿಗೆ ಉತ್ತರಿಸುವಾಗ ಅರ್ಥವಾಗದ ವಿಚಿತ್ರ ಭಾಷೆಯನ್ನು ಬಳಸುತ್ತಿದ್ದ ಬಗ್ಗೆಯೂ ಹಾಗೂ ಆಯ್ದಫೋನ್ ಕರೆಗಳಿಗೆ ಸಂಬಂಧಿಸಿ ಸ್ಥಳದಲ್ಲಿ ನಿಲ್ಲದೆ ಸಂಚರಿಸುತ್ತಲೇ ಮಾತನಾಡುತ್ತಿದ್ದ ನಡೆಯನ್ನು ಗಮನಿಸಿ ಸಂಶಯಿಸಿ ಆತನ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತಾದರೂ ಪೊಲೀಸರು ಆತನನ್ನು ಕರೆಯಿಸಿದ ವೇಗದಲ್ಲಿಯೇ ಹಿಂದಕ್ಕೆ ಕಳುಹಿಸಿ ತನಿಖೆಯನ್ನು ಪೂರ್ಣಗೊಳಿಸಿದ್ದರು.
ಪರಿಚಯವಿಲ್ಲದ ಕೆಲ ಮಂದಿಗಳು ಪದೇ ಪದೇ ಬರುತ್ತಿದ್ದ ಮಾಹಿತಿಗಳೂ ದೊರಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.