ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನನ್ನು ದಿಂಬಿನಲ್ಲಿ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ದೆಹಲಿಯ ವಸಂತವಿಹಾರ ಪ್ರದೇಶದಲ್ಲಿ ಇರುವ ತನ್ನ ಮನೆಯಲ್ಲಿಯೇ ಕಿಟ್ಟಿ ಅವರ ಹತ್ಯೆ ಮಾಡಲಾಗಿದೆ. ಮನೆಯ ಕೆಲಸದವರಿಂದಲೇ ಈ ಕೃತ್ಯ ನಡೆದಿದೆ. ವೃತ್ತಿಯಲ್ಲಿ ಲಾಯರ್ ಆಗಿರುವ ಕಿಟ್ಟಿ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ.
ಕಿಟ್ಟಿ ಅವರ ನಿವಾಸದಲ್ಲಿಯೇ ಕೆಲಸ ಮಾಡುತ್ತಿದ್ದ ರಾಜು ಲಕ್ಕನ್ ರಾತ್ರಿ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿ ಮಂಜು ಎಂಬ ಕೆಲಸದ ಮಹಿಳೆಯಿದ್ದು, ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ, ಕಿಟ್ಟಿ ಅವರ ಮುಖಕ್ಕೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಹಣ,ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.