ಬೆಂಗಳೂರು : ಹಠಾತ್ ನಿಧನರಾದ ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭಾವಂತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಡ ಇದೀಗ ದಿನೇ ದಿನೇ ಹೆಚ್ಚಾಗ್ತಿದೆ.
ಇದಕ್ಕೆ ಇದೀಗ ರಾಜ್ಯ ಸರ್ಕಾರವೂ ಸಕರಾತ್ಮಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಕಲೆ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ಇತಿಹಾಸ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ಕೇಂದ್ರ ಸರ್ಕಾರ ಮಹನೀಯರಿಗೆ ನೀಡಿ ಗೌರವಿಸುತ್ತದೆ.
ಅತೀ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಮಾಡಿ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ವರನಟ ಡಾ.ರಾಜ್ಕುಮಾರ್ ಪುತ್ರರೂ ಆಗಿರುವ ಪುನೀತ್ರಾಜ್ಕುಮಾರ್ ಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರವನ್ನು ನೀಡುವ ಮೂಲಕ ಅಗಲಿದ ಮೇರು ನಟನಿಗೆ ಗೌರವ ಸಲ್ಲಿಸಬೇಕೆಂಬುದು ಇಡೀ ಕರ್ನಾಟಕ ಜನತೆಯ ಒತ್ತಾಸೆಯಾಗಿದೆ.
ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ, ಸಾರ್ವಜನಿಕ ವಲಯ ಹಾಗೂ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರಿಗೆ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಬೇಕೆಂಬ ಬೇಡಿಕೆಯನ್ನು ಈಗಾಗಲೇ ಇಟ್ಟಿದೆ.
ಹೀಗಾಗಿ ನಟ ಪುನೀತ್ಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಕೇಂದ್ರಕ್ಕೆ ನಟ ಪುನೀತ್ ಹೆಸರಿನ ಶಿಫಾರಸು ಪತ್ರ ಕಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ನವೆಂಬರ್ 16ರ ಬಳಿಕ ಸರ್ಕಾರದ ಮಟ್ಟದಲ್ಲಿ ಹಾಗೂ ಪುನೀತ್ ಕುಟುಂಬದ ಜತೆ ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.