ಮಂಗಳೂರು: ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್‌ಐಟಿಕೆ ಬಳಿ ಇರುವ ಅಕ್ರಮ ಟೋಲ್‌ಗೇಟ್ ತೆರವಿನ ದಿನಾಂಕ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ಕಾರ್ಯಕ್ರಮ ಇಂದು ಟೋಲ್‌ಗೇಟ್ ಸಮೀಪ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಧರಣಿ ಸಂಜೆ 5 ಗಂಟೆಯವರೆಗೆ ನಡೆದಿತ್ತು. ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಈ ಧರಣಿಯಲ್ಲಿ ಪ್ರಮುಖರಾದ ಮುನೀರ್ ಕಾಟಿಪಳ್ಳ, ದಿನೇಶ್ ಹೆಗ್ಡೆ ಉಳೇಪಾಡಿ, ಮೊಯ್ದೀನ್ ಬಾವ, ಮಿಥುನ್ ರೈ, ಪಿ ವಿ ಮೋಹನ್, ಪ್ರತಿಭಾ ಕುಳಾಯಿ, ಇಮ್ತಿಯಾಝ್ , ಪುರುಷೋತ್ತಮ ಚಿತ್ರಾಪುರ,ಎಂ ಜಿ ಹೆಗ್ಡೆ, ಶೇಖರ ಹೆಜಮಾಡಿ ಮೊದಲಾದವರು ಪಾಲ್ಗೊಂಡಿದ್ದರು.
ಧರಣಿಗೆ ಮಣಿದು ಜಿಲ್ಲಾಧಿಕಾರಿಯವರ ಪರವಾಗಿ ಉಪತಹಶೀಲ್ದಾರ್ ನವೀನ್ ಆಗಮಿಸಿ ನಾಗರಿಕರಿಂದ ಮನವಿ ಸ್ವೀಕರಿಸಿದರು.
ಟೋಲ್‌ಗೇಟನ್ನು ತೆರವು ಮಾಡುವುದಾಗಿ ಭರವಸೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಇನ್ನೂ ಕೂಡಾ ದಿನಾಂಕ ನಿಗದಿಮಾಡದೇ ಜನತೆಯನ್ನು ವಂಚಿಸುತ್ತಾ ಟೋಲ್‌ಶುಲ್ಕ ವಸೂಲಿ ಮಾಡುತ್ತಲೇ ಇದ್ದಾರೆ.
ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದ್ದು, ಅಧಿಕಾರಿಗಳು ದಿನಾಂಕ ಘೋಷಣೆ ಮಾಡದೇ ಇದ್ದಲ್ಲಿ ಟೋಲ್‌ಗೇಟ್‌ಗೆ ಸಾಮೂಹಿಕ ಮುತ್ತಿಗೆ ಹಾಕಿ ನಾವೇ ತೆರವು ಮಾಡುವ ದಿನಾಂಕವನ್ನು ಘೋಷಣೆ ಮಾಡುತ್ತೇವೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ನುಡಿದರು.
ಇನ್ನು ಕಾಂಗ್ರೆಸ್ ಮುಖಂಡ ಮಿಥುನ್ ರೈ ಪ್ರತಿಕ್ರಿಯೆ ನೀಡಿ ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಅಧಿಕಾರಿಗಳು ದಿನಾಂಕ ಪ್ರಕಟಿಸಬೇಕು. ಇಲ್ಲವಾದರೆ ನಾವೇ ಟೋಲ್‌ಗೇಟ್ ತೆಗೆದು ಸಮುದ್ರಕ್ಕೆ ಎಸೆಯುತ್ತೇವೆ ಎಂದರು.