ಮಂಗಳೂರು : ಚಂದನವನದಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಗೋಲ್ಡನ್ ಮೂವೀಸ್ ಸಂಸ್ಥೆ ತುಳು ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಈ ಪ್ರೊಡಕ್ಷನ್‌ನ ಮೊದಲ ತುಳು ಸಿನಿಮಾ ಪ್ರೊಡಕ್ಷನ್ ನಂ 1ಗೆ ಮುಹೂರ್ತ ನೆರವೇರಿಸಲಾಗಿದೆ.
ಉದ್ಯಮಿ ಎಂ ಆರ್ ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮೊದಲ ಕ್ಲ್ಯಾಪ್ ಮಾಡಿದ್ದು, ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ ಜನಾರ್ದನ ಪೂಜಾರಿ ಅವರ ಆಶೀರ್ವಾದೊಂದಿಗೆ ನಟ ಗಣೇಶ್ ಕ್ಯಾಮೆರಾ ರೋಲ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಉದ್ಯಮಿ ರೋಹನ್ ಮೊಂತೆರೋ, ಲೀಲಾಕ್ಷ ಕರ್ಕೇರ , ತುಳು ಸಿನೆಮಾದ ಕಲಾವಿದರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ಗಣೇಶ್ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ನಟ ಗಣೇಶ್ , ನಾಲ್ಕು ವರ್ಷದ ಹಿಂದೆ ಮಂಗಳೂರಿಗೆ ಬಂದಾಗ ತುಳು ಸಿನೆಮಾ ಮಾಡಬೇಕು ಅಂತ ಯೋಚನೆ ಬಂದಿತ್ತು. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಈಗ ಅಂತಹ ಒಂದು ಉತ್ತಮ ಕಥೆ ಸಿಕ್ಕಿದೆ. ಹೀಗಾಗಿ ಶಿಲ್ಪಾ ಈ ಸಿನೆಮಾ ಮಾಡಲು ಮುಂದಾಗಿದ್ದಾಳೆ. ನನ್ನ ನಂಟು ತುಳುನಾಡಿನ ಜೊತೆ ಜಾಸ್ತಿ ಇದ್ದ ಕಾರಣ ಅವಕಾಶ ಸಿಕ್ಕರೆ ಈ ಸಿನೆಮಾದಲ್ಲಿ ಹಾಡಿನ ಸೀನ್‌ನಲ್ಲಾದ್ರೂ ಕಾಣಸಿಕೊಳ್ಳುವುದಾಗಿ ಹೇಳಿದ್ದಾರೆ.
ಪ್ರೊಡಕ್ಷನ್ ನಂಬರ್ 1 ಸಿನಿಮಾ ತುಳುನಾಡಿನ ಸೊಗಡಿನೊಂದಿಗೆ ಸುಂದರ ಸಾಂಸಾರಿಕ ಕಥೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ಮೊದಲ ಬಾರಿಗೆ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ನಾಯಕ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಅಂದಿನ ಖ್ಯಾತ ಮಾಡಲ್ ಇಂದಿನ ಸನ್ಯಾಸಿನಿ ; ಯಾರು ಈ ಸುಂದರ ಸಾಧ್ವಿ ?
ಇನ್ನು ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದ ಪ್ರಮುಖ ಕಲಾವಿದರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.