ಮಂಗಳೂರು/ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ತಂದೆಯನ್ನು ಸುಟ್ಟು ಹಾಕಿ ಕೊಂದಿದ್ದಾರೆ.
ಈ ಘಟನೆ ಪಾಕಿಸ್ತಾನದ ಲಾಹೋರ್ ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಗುಜ್ರಾನ್ ವಾಲಾದ ಮೊಘಲ್ ಚೌಕ್ ನಲ್ಲಿ ಸೋಮವಾರ ನಡೆದಿದೆ.
ಅಲಿ ಅಕ್ಬರ್ (48) ಮೃತ ವ್ಯಕ್ತಿ. ಇವರು ಮೂರು ಮದುವೆಯಾಗಿದ್ದು, 10 ಮಕ್ಕಳನ್ನು ಹೊಂದಿದ್ದರು. ಅಕ್ಬರ್ ಮೊದಲ ಪತ್ನಿ ತೀರಿಕೊಂಡಿದ್ದು, ಉಳಿದ ಇಬ್ಬರು ಪತ್ನಿಯರು ಮತ್ತು ಮಕ್ಕಳು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು.
ಅಷ್ಟಕ್ಕೂ ಮೃತ ವ್ಯಕ್ತಿ ಅಲಿ ಅಕ್ಬರ್ ತಮ್ಮ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು ಎಂದು ದೌರ್ಜನ್ಯಕ್ಕೊಳಗಾದ ಬಾಲಕಿಯರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
“ನಮ್ಮ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ನಾವಿಬ್ಬರೂ ನಮ್ಮ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದೇವು. ನಾವು ಅವರ ಬೈಕ್ ನಿಂದ ಪೆಟ್ರೋಲ್ ತೆಗೆದುಕೊಂಡು, ನಂತರ ಅವರು ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇವೆ” ಎಂದು ಇಬ್ಬರೂ ಹೆಣ್ಣುಮಕ್ಕಳು ಹೇಳಿಕೆ ನೀಡಿದ್ದಾರೆ.
ಸೋಮವಾರದಂದು ಅಕ್ಬರ್ ಮಲಗಿದ್ದಾಗ, ಅವನ 12 ಮತ್ತು 15 ವರ್ಷದ ಇಬ್ಬರು ಪುತ್ರಿಯರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ, ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಮೊದಲು ಮೃತನ ಇಬ್ಬರೂ ಪತ್ನಿಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಬಳಿಕ ಇಬ್ಬರೂ ಅಪ್ರಾಪ್ತ ಹುಡುಗಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು/ಒಟ್ಟಾವ : ಜಸ್ಟಿನ್ ಟ್ರುಡೊ ರಾಜೀನಾಮೆಯ ನಂತರ, ಭಾರತೀಯ ಮೂಲದ ಅನಿತಾ ಆನಂದ್ ಕೆನಡಾದ ಮುಂದಿನ ಪ್ರಧಾನ ಮಂತ್ರಿಯಾಗುವ ರೇಸ್ ನಲ್ಲಿದ್ದಾರೆ. ಆನಂದ್ ಅವರಿಗೆ ಭಾರತದೊಂದಿಗೆ ಆಳವಾದ ಸಂಬಂಧವಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸುಮಾರು ಒಂದು ದಶಕದ ಆಡಳಿತ ನಂತರ ಸೋಮವಾರ (ಜ.6) ರಾಜೀನಾಮೆ ನೀಡಿದರು. ಇದರಿಂದಾಗಿ ರಾಜಕೀಯ ವಲಯದಲ್ಲಿ ಸಂಚಲನ ಜೋರಾಗಿದೆ. ಅವರ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರುವಾಗಿದೆ.
ಕೆನಡಾದ ಮುಂದಿನ ಪ್ರಧಾನಿ ರೇಸ್ ನಲ್ಲಿ ಅನಿತಾ ಆನಂದ್, ಕ್ರಿಸ್ಟಿನಾ ಫ್ರೀಲ್ಯಾಂಡ್ ಮತ್ತು ಮಾರ್ಕ್ ಕೆರ್ನಿ ಅವರಂತಹ ಪ್ರಮುಖ ಹೆಸರುಗಳು ಹೊರಹೊಮ್ಮುತ್ತಿವೆ. ಇವರಲ್ಲಿ ಭಾರತೀಯ ಮೂಲದ ನಾಯಕಿ ಅನಿತಾ ಆನಂದ್ ಅವರ ಪರಿಣಾಮಕಾರಿ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಉತ್ತಮ ದಾಖಲೆಯಿಂದಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಹಲವಾರು ಖಾತೆ ನಿರ್ವಹಣೆ
2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.
ಭಾರತದಿಂದ ಕೆನಾಡಾಗೆ ವಲಸೆ
ಅನಿತಾ ಆನಂದ್ ರವರ ತಂದೆ ಎಸ್.ವಿ.ಆನಂದ್ ತಮಿಳುನಾಡಿನವರು, ತಾಯಿ ಸರೋಜ್ ಡಿ ರಾಮ್ ಪಂಜಾಬಿನವರು. ಇಬ್ಬರು ವೈದ್ಯರಾಗಿದ್ದರು. 1960ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಗೆ ವಲಸೆ ಬಂದಿದ್ದರು. ವೈದ್ಯ ದಂಪತಿಯ ಪುತ್ರಿಯಾಗಿ 1967ರ ಮೇ 20ರಂದು ಜನಿಸಿದ ಅನಿತಾ, ವಿದ್ಯಾರ್ಥಿ ಜೀವನದಿಂದಲೂ ತಮ್ಮ ಪೋಷಕರಿಂದ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು ಮತ್ತು ವೃತ್ತಿಸಂಹಿತೆಯನ್ನು ಅಳವಡಿಸಿಕೊಂಡಿದ್ದರು.
ಅನಿತಾರ ವಿದ್ಯಾಭ್ಯಾಸ
57 ವರ್ಷದ ಅನಿತಾ ಆನಂದ್ ಪ್ರಸ್ತುತ ಕೆನಡಾ ದೇಶದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶೈಕ್ಷಣಿಕ ಮತ್ತು ರಾಜಕೀಯ ಹಿನ್ನೆಲೆಯಿಂದಾಗಿ, ಅವರು ಪ್ರಮುಖ ರಾಜಕೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅನಿತಾ ಆನಂದ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಜ್ಯೂರಿಸ್ ಪ್ರೂಡೆನ್ಸ್, ಡಾಲ್ ಹೌಸಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಲಾಸ್ ಅನ್ನು ಹೊಂದಿದ್ದಾರೆ.
ಹೆಚ್ಚುವರಿಯಾಗಿ, ಅವರು ಯೇಲ್, ಕ್ವೀನ್ಸ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ಸ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು.
ಸ್ಕೋಟಿಯಾದಿಂದ ಒಂಟಾರಿಯೊಗೆ ಸ್ಥಳಾಂತರ
ಅನಿತಾ ಅವರು ಓಕ್ ವಿಲ್ಲೆಯ ಸಂಸದೆಯಾಗಿದ್ದರು. ನೋವಾ ಸ್ಕೋಟಿಯಾದಲ್ಲಿ ಜನಿಸಿದ್ದ ಅನಿತಾ ಆನಂದ್, 1985ರಲ್ಲಿ ಒಂಟಾರಿಯೊಗೆ ಸ್ಥಳಾಂತರಗೊಂಡಿದ್ದರು. ಅನಿತಾ ಮತ್ತು ಪತಿ ಜಾನ್ ಅವರೊಂದಿಗೆ ನಾಲ್ವರು ಮಕ್ಕಳನ್ನು ಬೆಳೆಸಿದರು.
ವೃದ್ದಿಸುತ್ತಾ ಎರಡು ದೇಶಗಳ ಸಂಬಂಧ
ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೂಲದ ಜನರಿದ್ದಾರೆ. ಈ ಕಾರಣಕ್ಕಾಗಿ, ಭಾರತೀಯ ಮೂಲದ ವ್ಯಕ್ತಿ ಪ್ರಧಾನಿಯಾಗುವುದು ಭಾರತಕ್ಕೆ ಒಳ್ಳೆಯ ಸಂಕೇತಗಳನ್ನು ನೀಡಬಹುದು. ಈ ಹಿಂದೆ, ಟ್ರುಡೊ ಅವರ ಆಳ್ವಿಕೆಯಲ್ಲಿ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು, ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು.
ಈಗ ಭಾರತ ಮೂಲದವರೇ ಆದ ಅನಿತಾ ಆನಂದ್ ರವರು ಕೆನಡಾ ದೇಶದ ಪ್ರಧಾನಿಯಾದರೆ ಭಾರತ ಮತ್ತು ಕೆನಡಾ ದೇಶಗಳ ಸಂಬಂಧ ಇನ್ನಷ್ಟು ವೃದ್ದಿಯಾಗಲಿದೆ.
ಮಂಗಳೂರು/ಬೀಜಿಂಗ್ : ಸಾಮಾನ್ಯವಾಗಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಚೀನಾದ ಸೈನಿಕರ ತರಬೇತಿಯಲ್ಲಿ, ಯೋಧರ ಕೊರಳಪಟ್ಟಿಗಳ ಮೇಲೆ ಗುಂಡು ಪಿನ್ ಗಳನ್ನು ಅಂಟಿಸಿರುವುದು, ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
ಮಿಲಿಟರಿ ಸೇವೆಯಲ್ಲಿ ಸೈನಿಕರು ನಡೆಯುವ ರೀತಿ, ಚಲಿಸುವ ಅಥವಾ ನಿಂತಿರುವ ರೀತಿಯಲ್ಲಿ ವಿಶೇಷ ಗಮನ ಹರಿಸುತ್ತಾರೆ. ಸೈನಿಕರು ತಮ್ಮ ಎದೆಯನ್ನು ಮೇಲಕ್ಕೆತ್ತಿ, ಕುತ್ತಿಗೆಯನ್ನು ನೇರವಾಗಿ ಮತ್ತು ಕೈಗಳನ್ನು ನೇರವಾಗಿ ನಿಲ್ಲಬೇಕು ಎಂಬ ನಿಯಮ ಇದೆ. ಈ ನಿಯಮ ಚೀನಾದ ಸೇನೆಯಲ್ಲೂ ಇದೆ.
ಚೀನಾದ ಸೈನಿಕರ ಸಮವಸ್ತ್ರದ ಕೊರಳಪಟ್ಟಿಗಳ ಮೇಲೆ ಗುಂಡುಪಿನ್ ಗಳನ್ನು ಅಂಟಿಕೊಂಡಿರುವ ರೀತಿಯಲ್ಲಿ ಇರಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೂ ಇದೆ. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ಗಟ್ಟಿಯಾಗಿರಿಸಲು ಈ ರೀತಿಯಾಗಿ ಪಿನ್ ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.
ಕುತ್ತಿಗೆಯನ್ನು ಬಾಗಿಸಿದಾಗ ಪಿನ್ ಗಳು ಕುತ್ತಿಗೆಗೆ ಚುಚ್ಚುವ ರೀತಿಯಲ್ಲಿ ಕಾಲರ್ ನಲ್ಲಿ ಇರಿಸಲಾಗಿದೆ. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ನೇರವಾಗಿರಿಸಲು ಈ ರೀತಿ ಮಾಡಲಾಗುತ್ತದೆ. ಅಲ್ಲದೆ, ಸದಾ ಅಲರ್ಟ್ ಆಗಿರಲು ಈ ರೀತಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಪರೇಡ್ ಸಂದರ್ಭಗಳಲ್ಲಿ ಅನುಸರಿಸಲಾಗುತ್ತದೆ.
ಪ್ರತಿಯೊಬ್ಬ ಸೈನಿಕನಿಗೂ ಈ ವಿಧಾನ ಅನ್ವಹಿಸುವುದಿಲ್ಲ. ಬದಲಾಗಿ ಕುತ್ತಿಗೆ ನೇರವಾಗಿರಿಸದ ಸೈನಿಕರಿಗೆ ಇದನ್ನು ಬಳಸುತ್ತಾರೆ ಮತ್ತು ಇದರಿಂದ ಅವರ ಭಂಗಿಯನ್ನು ಸರಿಪಡಿಸಲಾಗುತ್ತದೆ.
ಮಂಗಳೂರು/ಕೀನ್ಯಾ : 2025ರಲ್ಲಿ ಭೂಮಿಯ ಮೇಲೆ ಭಾಹ್ಯಾಶದಿಂದ ಉಲ್ಕೆಗಳು ಅಥವಾ ಏಲಿಯನ್ ದಾಳಿ ಆಗಬಹುದು ಅಂತ ಕಾಲಜ್ಞಾನಿ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಒಂದು ಘಟನೆ ನಡೆದಿದ್ದು, ಆಕಾಶದಿಂದ 500 ಕೆಜಿ ತೂಕದ ಉಂಗುರವೊಂದು ಭೂಮಿಗೆ ಅಪ್ಪಳಿಸಿದೆ. ಹಾಗಂತ ಇದು ಏಲಿಯನ್ ಅಥವಾ ಕ್ಷುದ್ರಗ್ರಹಗಳಿಂದ ಸಿಡಿದ ಉಂಗುರ ಅಲ್ಲ ಅಂತ ವಿಜ್ಞಾನಿಗಳು ಸ್ಪಷ್ಟ ಪಡಿಸಿದ್ದಾರೆ.
ಈ ಬೃಹದಾಕಾರದ ಉಂಗುರ ಕೀನ್ಯಾ ದೇಶದ ಉತ್ತರದಲ್ಲಿರುವ ಮುಕುನಿ ಕೌಂಟಿಯ ಮುಕುಕು ಗ್ರಾಮದ ಮೇಲೆ ಬಂದು ಬಿದ್ದಿದೆ. ಇದು ಅಂದಾಜು 500 ಕೆ.ಜಿ ಭಾರ ಇರಬಹುದು ಅಂತ ಊಹಿಸಲಾಗಿದ್ದು, ಸದ್ಯಕ್ಕೆ ಈ ಉಂಗುರ ಬಿದ್ದ ಜಾಗವನ್ನು ಕೀನ್ಯಾ ಬಾಹ್ಯಾಕಾಶ ಸಂಸ್ಥೆ(KSA) ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದೆ. ಸುಮಾರು ಎಂಟು ಅಡಿ ವ್ಯಾಸದ ಬೃಹತ್ ಲೋಹದ ಉಂಗುರ ಇದಾಗಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಭೂಮಿಯಿಂದ ಅಂತರಿಕ್ಷಕ್ಕೆ ಉಡಾವಣೆಯಾದ ಉಡಾವಣಾ ವಾಹನದ ಭಾಗ ಎಂದು ಅಂದಾಜಿಸಲಾಗಿದೆ. ಆಕಾಶಕ್ಕೆ ನೆಗೆಯುವ ಉಡಾವಣಾ ವಾಹನಗಳು ಹಂತ ಹಂತವಾಗಿ ಕಳಚುವ ಸಮಯದಲ್ಲಿ ಬೇರ್ಪಟ್ಟ ಭಾಗ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಕೀನ್ಯಾದಲ್ಲಿ ಈ ಘಟನೆ ಮೊದಲ ಬಾರಿಗೆ ನಡೆದಿದೆಯಾದ್ರೂ ಕಳೆದ ಕೆಲವು ವರ್ಷಗಳಲ್ಲಿ ಇಂತಹ ಘಟನೆಗಳು ಭೂಮಿಯ ಅಲ್ಲಲ್ಲಿ ನಡಿತಾ ಇದೆ. ಬಾಹ್ಯಾಕಾಶದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ರಾಕೇಟ್ ಲಾಂಚರ್ಗಳ ಅವಶೇಷಗಳು ಭೂಮಿಗೆ ಅ*ಪಾಯ ತಂದೊಡ್ಡುತ್ತಿದೆ. ಕಳೆದ ವರ್ಷ ಇಂತಹದೇ ಒಂದು ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಆಕಾಶದಿಂದ ಬಿದ್ದ ಲೋಹದ ತುಂಡು ಮನೆಯೊಂದಕ್ಕೆ ಹಾನಿ ಮಾಡಿತ್ತು. ಇದಕ್ಕೆ ಮನೆಯವರು ನಾಸಾದ ವಿರುದ್ಧ ಕೇಸು ದಾಖಲಿಸಿದ್ದರು. ಇದಲ್ಲದೆ, 2024 ರ ಫೆಬ್ರವರಿಯಲ್ಲಿ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಇಂತಹ ಒಂದು ಬೃಹತ್ ವಸ್ತು ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ಬಿದ್ದಿರುವುದಾಗಿ ಹೇಳಿತ್ತು.
ಬಾಹ್ಯಾಕಾಶದಲ್ಲಿ ಲೋ ಅರ್ಥ್ ಆರ್ಬಿಟ್ ( LEO ) ವಿಶ್ವದ ಅತೀ ದೊಡ್ಡ ಕಸದ ಡಂಪ್ ಎಂದು ಪರಿಗಣಿಸಲಾಗಿದೆ. ನಾಸಾ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಸುಮಾರು ಆರು ಸಾವಿರ ಟನ್ ಇಂತಹ ತ್ಯಾಜ್ಯಗಳು ಸುತ್ತುತ್ತಿವೆ. ಇದು ಸಾಮಾನ್ಯವಾಗಿ ಉಂಟಾಗುವ ಘರ್ಷಣೆಯಿಂದ ಭೂಮಿಗೆ ಅಪ್ಪಳಿಸುತ್ತಿವೆ ಎಂದು ಹೇಳಿದೆ.
Pingback: ಮೊಮ್ಮಗುವಿನ ಪಾಲನೆಗೆ ಟೆಕ್ಕಿ ಅತುಲ್ ತಾಯಿ ಮೊರೆ; ಸುಪ್ರೀಂ ನಕಾರ - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಕೆನಾಡಾ ಪ್ರಧಾನಿ ರೇಸ್ ನಲ್ಲಿರುವ ಅನಿತಾ ಆನಂದ್ ಯಾರು ? - NAMMAKUDLA NEWS - ನಮ್ಮಕುಡ್ಲ ನ್ಯೂಸ್