ಮಂಗಳೂರು: ಶೈಕ್ಷಣಿಕವಾಗಿ, ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ಬುದ್ದಿವಂತರ ಜಿಲ್ಲೆ ಮದ್ಯಪಾನದಲ್ಲೂ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಅಲ್ಲದೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಪ್ರತಿದಿನಕ್ಕೆ ಸುಮಾರು 60 ಲೀಟರ್ನಂತೆ ಪ್ರತಿ ವರ್ಷ ಸುಮಾರು 2.2 ಕೋಟಿ ಲೀಟರ್ ಹಾರ್ಡ್ ಲಿಕ್ಕರ್, 1.4 ಕೋಟಿ ಲೀಟರ್ ಬಿಯರ್ ಮಾರಾಟವಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮದ್ಯ ಸೇವನೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಲಕ್ಷ ಬಾಕ್ಸ್ ಹಾರ್ಡ್ ಡ್ರಿಂಕ್ಸ್ ಮದ್ಯವನ್ನು ಸೇವಿಸಲಾಗಿದೆ.
ವರ್ಷಕ್ಕೆ ಸರಾಸರಿ 18 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಈ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ ಸುಮಾರು 370 ಕೋಟಿ ರೂಪಾಯಿ ಆದಾಯ ರಾಜ್ಯಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ.
ಈ ಬಗ್ಗೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಪಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 463 ಮದ್ಯದಂಗಡಿಗಳು ಜಿಲ್ಲೆಯಲ್ಲಿ ಇದ್ದವು. ಪ್ರಸ್ತುದ ಆ ಸಂಖ್ಯೆ 520ಕ್ಕೆ ಏರಿಕೆಯಾಗಿದೆ.
ಚೀಪ್ ಮಾಲ್ಗಳಿಗೆ ಭಾರೀ ಬೇಡಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗ್ಗದ ಬೆಲೆಯ ಮದ್ಯಗಳಿಗೆ ಹೆಚ್ಚು ಬೇಡಿಕೆ ಇದೆ. ಮಾರಾಟವಾಗುವ ಮದ್ಯಗಳ ಪೈಕಿ ಶೇ.85ರಷ್ಟು ಮದ್ಯಗಳು ಅಗ್ಗದ ಬೆಲೆಯದ್ದಾಗಿವೆ.
ಶೇ.3ರಷ್ಟು ಜನರು ಮಾತ್ರ ಡೀಲಕ್ಸ್, ಸ್ಕಾಚ್, ಸಿಂಗಲ್ ಮಾಲ್ಟ್, ಪ್ರೀಮಿಯಂನಂತಹ ಮದ್ಯವನ್ನು ಖರೀದಿಸುತ್ತಾರೆ. ಜಿಲ್ಲೆಯಲ್ಲಿ 180 ಎಂಎಲ್ ಸ್ಯಾಚೆಟ್ ಮದ್ಯಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂದು ಹೇಳಿದೆ.