ಮಂಗಳೂರು: ನೂತನ ಸಚಿವ ಸಂಪುಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 3 ಸಚಿವ ಸ್ಥಾನ ಸಿಕ್ಕಿದೆ. ಸದ್ಯ ಸಿಎಂ ಕಚೇರಿಯಿಂದ ಮೂವರಿಗೂ ದೂರವಾಣಿ ಕರೆ ಹೋಗಿದ್ದು, ಮೂವರೂ ಪ್ರಮಾಣವಚನಕ್ಕೆ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಇಂದು ಮಧ್ಯಾಹ್ನ 2.15ಕ್ಕೆ ಬೆಂಗಳೂರಿನ ರಾಜ್ಯಪಾಲರ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸ್ಥಾನ ದೊರಕಿದ್ದು, ಸಿಎಂ ಕಚೇರಿಯಿಂದ ದೂರವಾಣಿ ಕರೆ ಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಆರ್‌ಎಸ್‌ಎಸ್ ಹಿನ್ನೆಲೆ ಉಳ್ಳ ಹಾಗೂ 6 ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಇದೆ. ಜೊತೆಗೆ ಕಳೆದ ಬಾರಿ ಕೇವಲ 6 ತಿಂಗಳು ಮಾತ್ರ ಬಂದರು ಮತ್ತು ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜೊತೆಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೂ ಸಿಎಂ ಕಚೇರಿಯಿಂದ ದೂರವಾಣಿ ಕರೆ ಹೋಗಿದೆ. ಇವರು ಮೊದಲ ಬಾರಿಗೆ ಸಚಿವರಾಗಿ ಸ್ಥಾನ ಪಡೆದಿದ್ದಾರೆ. ಮುಜರಾಯಿ ಖಾತೆಯ ಮಾಜಿ ಸಚಿವ ಕೋಟಾ ಶ್ರಿನಿವಾಸ ಪೂಜಾರಿ ಅವರಿಗೂ ಸ್ಥಾನ ಒಲಿದಿದೆ. ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 3 ಸಚಿವ ಸ್ಥಾನ ಸಿಕ್ಕಂತಾಗಿದೆ. ನಿನ್ನೆಯವರೆಗೂ ಕೇವಲ 12 ಜನರಿಗೆ ಸಚಿವ ಸ್ಥಾನ ಪಟ್ಟಿಯನ್ನು ಫೈನಲ್ ಮಾಡಲಾಗಿತ್ತು. ಆದರೆ ಇಂದು 29 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ.