ಬೆಂಗಳೂರು: ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಜಿಪಿ ಮುಖಂಡರ ಪುತ್ರಿಯ ಹೇಳಿಕೆಯ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರ ಪುತ್ರಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ತಂದೆ ವಿರುದ್ಧ ಹರಿಹಾಯ್ದಿದ್ದಾರೆ.
ಸಿ.ಪಿ. ಯೋಗೇಶ್ವರ್ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮೊದಲನೇ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಕುರಿತಾಗಿ ವಿಡಿಯೊ ವೊಂದನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
‘ನನ್ನ ತಂದೆ ಮತ್ತು ಚಿಕ್ಕಮ್ಮ(ಮಲತಾಯಿ) ಇಬ್ಬರೂ ಮೊದಲನೇ ಪತ್ನಿಯ ಮಗಳಾದ ನನ್ನನ್ನು ಬೆಳೆಸಿ ಆದರ್ಶವಾಗಲಿಲ್ಲ. ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಯಿಸುತ್ತಾರೆ. ಮಾತನಾಡಿಸಲು ಮುಂದಾದರೆ ಕಪಾಳಕ್ಕೆ ಹೊಡೆಯುತ್ತಾರೆ. ನಿನಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ. ಭಿಕ್ಷೆ ಬೇಡಿ ಬದುಕು ಎನ್ನುತ್ತಾರೆ. ನನ್ನ ಬದುಕಿನಿಂದ ತಂದೆ ಹೊರ ಹೋದಾಗಿನಿಂದಲೂ ವನವಾಸ ಅನುಭವಿಸುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.
Read More..; ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್
‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದೆ. ನನ್ನ ಹೆಸರಿನ ಮುಂದೆ ತಮ್ಮ ಹೆಸರನ್ನು ಬಳಸದಂತೆ ತಾಕೀತು ಮಾಡಿದರು. ಅವರ ಹೆಸರು ಇಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂದು ಹೀಯಾಳಿಸಿದ್ದಾರೆ. ಈ ಬಗ್ಗೆ ಮಾತನಾಡಲು ಇಷ್ಟಪವಿಲ್ಲದಿದ್ದರೂ ಕೂಡಾ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ. ನಾನು ಹತ್ತು ವರ್ಷವಿದ್ದಾಗಲೇನನ್ನ ತಂದೆ ನಮ್ಮ ಬದುಕಿನಿಂದ ಹೊರ ನಡೆದಿದ್ದಾರೆ. ಆದರೂ, ಚುನಾವಣೆ ಸಂದರ್ಭದಲ್ಲಿ ಕರೆದಾಗ ಅವರ ಪರ ಪ್ರಚಾರ ಮಾಡಿದ್ದೆ. ಅವರಿಷ್ಟಕ್ಕೆ ಅನುಗುಣವಾಗಿ ಕೆಲಸ ಮಾಡಿದಾಗ ಎಲ್ಲವೂ ಚೆನ್ನಾಗಿತ್ತು. ಈಗ 24 ವರ್ಷದ ನಂತರ ನನ್ನ ಬಗ್ಗೆ ಯೋಚಿಸಿದ್ದಕ್ಕೆ ಆದರ್ಶ ಮಗಳಾಗದೆ ಯಾರಿಗೂ ಬೇಡವಾಗಿದ್ದೇನೆ. ತಂದೆ ಹೆಸರನ್ನು ಬಳಸಬಾರದೆಂಬ ಮಾತು ಬರುತ್ತಿವೆ’ ಎಂದು ನಿಶಾ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
‘ಈ ರೀತಿ ಕಾಮೆಂಟ್ ಮಾಡುವವರು ಯಾರೆಂದು ನನಗೆ ಗೊತ್ತಿದೆ. ಅವರೆಲ್ಲರೂ ಒಂದು ಕಡೆ ಸೇರಿ ನನ್ನ ಆಧಾರ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಹಲವು ಕಡೆ ತಂದೆ ಹೆಸರನ್ನು ಹೇಗೆ ತೆಗೆಯಬೇಕೆಂದು ನನಗೆ ಹೇಳಿ ಕೊಡಲಿ. ಹೆಸರು ತೆಗೆದರೆ ಅವರು ನನ್ನ ತಂದೆ ಎಂಬ ಸತ್ಯ ಸುಳ್ಳಾಗುತ್ತಾ..? 24 ವರ್ಷದ ಹಿಂದೆ ಅವರ ಜೀವನದಿಂದ ನನ್ನನ್ನು ತೆಗೆದುಬಿಟ್ಟಿದ್ದೀರಿ. ಈಗ ಹೆಸರಿನ ಮುಂದೆಯೇ ಅವರನ್ನು ತೆಗೆಯಲು ಮುಂದಾಗಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.
ಕೈ ಸೇರಲು ಯತ್ನ:
ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯವಾಗಿದ್ದ ನಿಶಾ, ಕಾಂಗ್ರೆಸ್ ಸೇರಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನಾಯಕರ ಜೊತೆಯೂ ಕಾಣಿಸಿಕೊಂಡಿದ್ದರು. ಪಕ್ಷ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ್ದ ಶಿವಕುಮಾರ್ ನಿಶಾ ರವರಿಗೆ ಇನ್ನೂ ಮದುವೆ ಆಗಿಲ್ಲ. ಅವರು ತಂದೆ ಮನೆಯಲ್ಲೇ ಇರಬೇಕು. ಮಗಳ ಮದುವೆ ಸಮಯದಲ್ಲಿ ತಂದೆ ಧಾರೆ ಎರೆದು ಕೊಡಬೇಕು. ತಂದೆ- ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಹೇಳಿದ್ದರು.
ಮೋದಿ ಭೇಟಿ ಮಾಡಿಸಲಿಲ್ಲ – ನಿಶಾ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ ನನ್ನ ತಾಯಿಯ ಕಪಾಳಕ್ಕೆ ತಂದೆ ಹೊಡೆದಿದ್ದರು. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಹೊಡೆದು, ಮನೆಯಿಂದ ಸಾಮಗ್ರಿ ಹೊರ ಹಾಕಿದ್ದರು. ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದೆ. ಆದರೆ, ಬೇಕೆಂದೇ ಭೇಟಿ ಮಾಡಿಸಲಿಲ್ಲ. ಇದೆಂಥಾ ನ್ಯಾಯ ಎಂದು ನಿಶಾ ಪ್ರಶ್ನಿಸಿದ್ದಾರೆ.
ಮಗಳಿಗೆ ಯಾಕೆ ಒಂದು ದಾರಿ ತೋರಿಸಲಿಲ್ಲ ಎಂದು ನನ್ನ ತಂದೆಯನ್ನು ಪ್ರಶ್ನಿಸಿ. ಅವರು ನನ್ನಿಂದ ಮಾತ್ರ ಸರಿಯಾದುದನ್ನು ಬಯಸಿದರೆ ಸಾಕೇ? ಅವರು ಸರಿಯಾಗಿರಬೇಕಲ್ಲವೇ? ಮಾತನಾಡಲು ನನ್ನ ಬಳಿ ಸಾಕಷ್ಟಿದೆ. ನನ್ನನ್ನು ಶಾಂತವಾಗಿರಲು ಬಿಡಿ. ಇಲ್ಲದಿದ್ದರೆ, ನೀವು ಎಲ್ಲಿ ತಲೆ ಎತ್ತಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೊ ಅಲ್ಲಿಗೆ ವಿಡಿಯೊ ಕಳಿಸುತ್ತೇನೆ ಎಂದು ತಂದೆಗೆ ಎಚ್ಚರಿಸಿದ್ದಾರೆ.