ಮಂಗಳೂರು/ಬೆಂಗಳೂರು : ಡಿಸೆಂಬರ್ 19ರಂದು ಬೆಳಗಾವಿಯ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಪ್ರಕರಣ ಸಂಬಂಧ ಪರಿಷತ್‌ನ ಕಾಂಗ್ರೆಸ್ ಸದಸ್ಯರಾದ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಗುರುವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದು, ಕಲಾಪದ ಸಂದರ್ಭದಲ್ಲಿ ಸಿ.ಟಿ. ರವಿ ಅವರು ಸಚಿವೆ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಸಿದ್ದು ನಿಜ ಮತ್ತು ಅದನ್ನು ನಾವುಗಳು ವಿರೋಧಿಸಿದ್ದೆವು ಎಂದು ಹೇಳಿಕೆ ದಾಖಲಿಸಿದ್ದಾರೆ.
ಅಶ್ಲೀಲ ಪದ ಬಳಕೆ ನಿಜ ಎಂದ ಪರಿಷತ್ ಸದಸ್ಯರು
ಕಲಾಪದ ಸಂದರ್ಭದಲ್ಲಿ ಸಿ.ಟಿ. ರವಿ ಅವರು ವಿಚಾರವೊಂದರ ಚರ್ಚೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದು ನಿಜ. ಆ ಪದವನ್ನು ಸ್ಪಷ್ಟವಾಗಿ ಕೇಳಿದ್ದೇವೆ. ಅದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಸ್ಥಳದಲ್ಲಿದ್ದ ನಾವು ಕೂಡಲೇ ರವಿ ವಿರುದ್ದ ಪ್ರತಿಭಟನೆ ನಡೆಸಿದ್ದೆವು. ಅಲ್ಲದೇ ಅವರ ವಿರುದ್ದ ಕ್ರಮಕ್ಕೆ ಸಭಾಪತಿಗಳಿಗೂ ದೂರು ನೀಡಿದ್ದೇವೆ. ಆದರೆ ರವಿ ಅವರು ಈ ಪದ ಬಳಕೆಯೇ ಮಾಡಿಲ್ಲ ಎಂದು ಹೇಳಿದರು. ಸಿ.ಟಿ. ರವಿ ಬಳಸಿದ ಅಶ್ಲೀಲ ಪದ ಕಡತದಲ್ಲಿ ದಾಖಲಾಗಿತ್ತು ಎಂದು ಇಬ್ಬರು ಸದಸ್ಯರು ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ
ಉಮಾಶ್ರೀ ಅವರನ್ನು ಮಹಿಳಾ ಡಿವೈಎಸ್ಪಿಯೊಬ್ಬರು ಮತ್ತು ನಾಗರಾಜ್ ಯಾದವ್ ಅವರನ್ನು ಡಿವೈಎಸ್ಪಿ ಕೇಶವಮೂರ್ತಿ ವಿಚಾರಣೆ ನಡೆಸಿದ್ದು, ಲಿಖಿತ ಮತ್ತು ಮೌಖಿಕ ರೂಪದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜತೆಗೆ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರವಿ ಬೇಷರತ್ ಕ್ಷಮೆ ಕೇಳಬೇಕು ಎಂದ ನಾಗರಾಜ್
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ನಾಗರಾಜ್ ಯಾದವ್, “ಪರಿಷತ್ ಕಲಾಪದಲ್ಲಿ ನಡೆದ ಘಟನೆಯನ್ನು ತನಿಖಾಧಿಕಾರಿಗಳಿಗೆ ಸಮರ್ಪಕವಾಗಿ ವಿವರಿಸಿದ್ದೇನೆ. ಯಾವ ಮಹಿಳೆಗೂ ಆ ರೀತಿಯ ಅಶ್ಲೀಲ ಪದ ಬಳಸಬಾರದು. ರವಿ ಅವರು ಮೊಂಡುತನ ಬಿಟ್ಟು ಬೇಷರತ್ ಕ್ಷಮೆ ಕೇಳಬೇಕು” ಎಂದರು