ಬೆಂಗಳೂರು: ಪತಿ ಕದಿರೇಶ್ ಕೊಲೆಯಾಗಿ ಮೂರು ವರ್ಷಗಳ ಬೆನ್ನಲ್ಲೆ ಪತ್ನಿ ರೇಖಾ ಕೂಡ ಹತ್ಯೆಗೀಡಾಗಿದ್ದು, ಕೊಲೆಯು ವಿವಿಧ ಕಾರಣಗಳನ್ನು ಬಿಚ್ಚಿಡುತ್ತಿರುವ ಜೊತೆಗೆ, ಹಳೇ ವೈಷ್ಯಮ್ಯ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ.
ಕತ್ತು, ಎದೆ ಸೀಳಿದರು
ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಅಂಜನಪ್ಪ ಗಾರ್ಡನ್ ಬಳಿ ಇದ್ದ ಬಿಜೆಪಿ ಕಚೇರಿಯಲ್ಲಿ ಬಡವರಿಗೆ ಫುಡ್ ಕಿಟ್ ವಿತರಣೆ ಮಾಡಲು ರೇಖಾ ಅವರು ಆಗಮಿಸಿದ್ದರು. ಫುಡ್ ಕಿಟ್ ವಿತರಿಸಲು ಬೇಕಾದ ಪಟ್ಟಿಯನ್ನು ಸಿದ್ಧಪಡಿಸಿ ಜನರನ್ನು ಕರೆಯಲು ಕಚೇರಿಯಿಂದ ಹೊರ ಬಂದಿದ್ದರು. ಆದರೆ ಜನರು ಸೇರಬೇಕು ಎನ್ನುವ ವೇಳೆ ಆರೋಪಿಗಳು ದಾಳಿ ನಡೆಸಿದ್ರು ಎನ್ನಲಾಗಿದೆ.
ತಮ್ಮ ಮೇಲೆ ದಾಳಿ ನಡೆಯುತ್ತಿರುವ ಮುನ್ಸೂಚನೆ ಲಭಿಸುತ್ತಿದಂತೆ ರೇಖಾ ಅವರು ಕಚೇರಿಯ ಒಳಹೋಗಲು ಯತ್ನಿಸಿದ್ದಾರೆ. ಆದರೆ ಹಂತಕರು ಅವರನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಈ ವೇಳೆ ರೇಖಾ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಬಳಿಕ ರೇಖಾ ಅವರ ಮೇಲೆ ಆರೋಪಿಗಳು ಡ್ಯಾಗರ್ನಿಂದ ಕತ್ತು, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
2018ರ ಫೆಬ್ರವರಿಯಲ್ಲಿ ಕದಿರೇಶ್ ಹತ್ಯೆ ನಡೆದಿತ್ತು. ರೌಡಿ ಶೋಭನ್ ಗ್ಯಾಂಗ್ ಈ ಹತ್ಯೆ ನಡೆಸಿತ್ತು. ಆಂಜನಪ್ಪ ಗಾರ್ಡನ್ 3ನೇ ಅಡ್ಡರಸ್ತೆ ನ್ಯೂ ಲೇಔಟ್‌ನಲ್ಲಿರೋ ಮುನೇಶ್ವರ ದೇವಾಲಯದ ಬಳಿ ನಾಲ್ಕು ಹಂತಕರ ತಂಡ ಕದಿರೇಶ್ ಮೇಲೆ ಎರಗಿ ಹತ್ಯೆಗೈದಿದ್ದರು. ಪೊಲೀಸರು ಆರೋಪಿಗಳಿಗಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹುಡುಕಾಡಿದ್ದರು. ಬಳಿಕ ಇಬ್ಬರನ್ನ ಪೊಲೀಸ್ರು ಬಂಧಿಸಿದ್ರೆ, ಉಳಿದ ಇಬ್ಬರು ಕೋರ್ಟ್ ಮುಂದೆ ಶರಣಾಗಿದ್ದರು.
ಕೃತ್ಯಕ್ಕೂ ಮುನ್ನ ಆರೋಪಿಗಳು ಸ್ಥಳದ ಸುತ್ತಮುತ್ತಲೂ ಇದ್ದ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿದ್ದಾರೆ. ಆ ಮೂಲಕ ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲೂ ಕೃತ್ಯ ಸೆರೆಯಾಗದಂತೆ ಮಾಡಿದ್ದಾರೆ. ಸ್ಥಳದಲ್ಲಿ 7ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಆರೋಪಿಗಳ ಕೃತ್ಯದ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಗದಂತಾಗಿದೆ.
ಕದಿರೇಶ್ ಯಾರು?
ಕದಿರೇಶ್ ಕಾಟನ್ಪೇಟೆಯ ರೌಡಿಶೀಟರ್. ಕದಿರೇಶ್ ಮೇಲೆ ಕಾಟನ್ ಪೇಟೆ ಠಾಣೆಯಲ್ಲಿ 14 ಕೇಸ್, ಶ್ರೀರಾಮ್ಪುರದಲ್ಲಿ ಒಂದು ಕೇಸ್ ಸೇರಿ 2001ರಿಂದ ಹಲವು ಪ್ರಕರಣಗಳು ದಾಖಲಾಗಿದ್ದವು. 2002ರಲ್ಲಿ ಜೋಪಡಿ ರಾಜೇಂದ್ರನ ಕೊಲೆ ಕೇಸ್ನಲ್ಲಿ ಕೂಡ ಕದಿರೇಶ್ ಆರೋಪಿಯಾಗಿದ್ದ.