ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಜನರಲ್ಲಿ ಅಭಯ ಹಾಗೂ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷತ್ ತನ್ನ ಯುವ ಸಂಘಟನೆ ಬಜರಂಗದಳ ಮತ್ತು ದುರ್ಗಾವಾಹಿನಿಯ ಸಹಕಾರದಲ್ಲಿ ಇಂದು ಭಿತ್ತಿಪತ್ರ ಪ್ರದರ್ಶಿಸುವ ಮುಖಾಂತರ ಜನಜಾಗೃತಿ ಸಭೆ ಮಂಗಳೂರಿನ ಪ್ರಮುಖ 7 ಜಂಕ್ಷನ್‌ಗಳಲ್ಲಿ ನಡೆಯಿತು.
ಮಂಗಳೂರಿನ ಜ್ಯೋತಿ ಜಂಕ್ಷನ್‌ನ ಡಾ। ಬಿ.ಆರ್. ಅಂಬೇಡ್ಕರ್ ವೃತ್ತ, ತೊಕ್ಕೊಟ್ಟು ಜಂಕ್ಷನ್, ಉರ್ವಸ್ಟೋರ್ ಜಂಕ್ಷನ್, ಕಾವೂರು ಜಂಕ್ಷನ್, ಮೂಡುಬಿದಿರೆ ಜಂಕ್ಷನ್, ಸುರತ್ಕಲ್ ಮತ್ತು ಗುರುಪುರದಲ್ಲಿ ಜನಜಾಗೃತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು ಭಯೋತ್ಪಾದಕರು ಹಿಂದುಗಳನ್ನು ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ.
ಇದೊಂದು ಆತಂಕಕಾರಿ ಬೆಳವಣಿಗೆ. ಆದರೆ ಯಾರೂ ಧೃತಿ ಗೆಡುವ ಅಗತ್ಯವಿಲ್ಲ; ಜನರ ಜತೆ ನಾವಿದ್ದೇವೆ ಎಂದರು. ಮಂಗಳೂರಿನ ಕದ್ರಿ, ಕುದ್ರೋಳಿ ಮತ್ತು ಮಂಗಳಾ ದೇವಿ ದೇವಸ್ಥಾನಗಳಿಗೆ ಹಾಗೂ ಸಂಘ ನಿಕೇತನಕ್ಕೆ ಸರಕಾರ ರಕ್ಷಣೆ ಒದಗಿಸಬೇಕೆಂದು ಈ ಸಂದರ್ಭದಲ್ಲಿ ಅವರು ಆಗ್ರಹಿಸಿದರು.
ಮುಖಂಡರಾದ ಶರಣ್ ಪಂಪ್ ವೆಲ್, ಗೋಪಾಲ ಕುತ್ತಾರ್, ಪುನೀತ್ ಅತ್ತಾವರ, ಹರೀಶ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.