Saturday, August 20, 2022

ಉಡುಪಿ: ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿದ ಕಂಟೈನರ್ ಲಾರಿ

ಉಡುಪಿ: ಗೋವಾ ಕಡೆಗೆ ರದ್ದಿ ಪೇಪರ್‌ ತುಂಬಿಕೊಂಡು ಹೊರಟ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಶನಿವಾರ ರಾತ್ರಿ ಉಡುಪಿ ಮಣಿಪಾಲದ ಕೆಳಪರ್ಕಳದಲ್ಲಿ ನಡೆದಿದೆ.


ಪರ್ಕಳದಿಂದ ಗೋವಾದ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಕಾಂಕ್ರೀಟ್‌ ರಸ್ತೆ ಮುಗಿದ ಬಳಿಕ ಇಳಿಜಾರು ಪ್ರದೇಶದಲ್ಲಿ ಇರುವ ಡಾಮರು ರಸ್ತೆಗೆ ತಿರುಗುವಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ಶೆಣೈ ಕಾಂಪೌಂಡ್‌ನ‌ ಮನೆಯ ಮೇಲೆ ಮಗುಚಿ ಬಿದ್ದಿದೆ.

ಮನೆಯಲ್ಲಿ ಯಾರು ವಾಸ ಮಾಡದೇ ಇರುವ ಕಾರಣ ಸಂಭವನೀಯ ದೊಡ್ಡ ಅಪಾಯವೊಂದು ತಪ್ಪಿದೆ. ಲಾರಿ ಚಾಲಕ ಕೂಡಾ ಅಪಾಯದಿಂದ ಪಾರಾಗಿದ್ದಾರೆ.

ಪರ್ಕಳ ದೇವಿನಗರದಿಂದ ಕೆಳಪರ್ಕಳ ತನಕ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆದಿದ್ದು ಅಲ್ಲಿಂದ ಈಶ್ವರನಗರ ತನಕ ಹಳೆಯ ರಸ್ತೆಯಲ್ಲೇ ವಾಹನಗಳು ಸಾಗಬೇಕಿದೆ. ಹೊಸ ಕಾಂಕ್ರೀಟ್‌ ರಸ್ತೆಯನ್ನು ಬಹಳಷ್ಟು ಎತ್ತರಿಸಿರುವುದರಿಂದ ಹಳೆಯ ಡಾಮರು ರಸ್ತೆ ತಗ್ಗಿನಲ್ಲಿದೆ.

ಪರ್ಕಳ ಕಡೆಯಿಂದ ಹೊಸರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ತಗ್ಗಿನಲ್ಲಿರುವ ಡಾಮರು ರಸ್ತೆಗೆ ತಿರುವು ಪಡೆದು ಕೊಳ್ಳಬೇಕು. ಅಲ್ಲದೆ ಅಲ್ಲಿ ಡಾಮರು ರಸ್ತೆಯ ಅರ್ಧ ಭಾಗ ಕುಸಿದು ಹೋಗಿರುವ ಕಾರಣ ಆಗಾಗ ಅಲ್ಲಿ ಅವಘಡಗಳು ಸಂಭವಿಸುತ್ತಿರುತ್ತವೆ.

ಶನಿವಾರ ಬೆಳಗ್ಗೆ 8ರವೇಳೆ ಬೃಹತ್‌ ಕಂಟೈನರ್‌ ಒಂದು ಇದೇ ಜಾಗದಲ್ಲಿ ಮೇಲಕ್ಕೆ ಬರಲಾಗದೆ ನಿಂತ ಕಾರಣ ಸುಮಾರು ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ವಿದ್ಯಾರ್ಥಿಗಳು, ನೌಕರರು ಸಕಾಲದಲ್ಲಿ ಗಮ್ಯ ಸೇರಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದರು. ಮನೆಯ ಮೇಲೆ ಮರಳು ತುಂಬಿದ ಲಾರಿ ಉರುಳಿದ್ದು ಸೇರಿದಂತೆ ಕಳೆದ 2 ತಿಂಗಳ ಅವಧಿಯಲ್ಲಿ ಇಲ್ಲಿ ಹಲವು ಅಪಘಾತಗಳು ಸಂಭವಿಸಲು ಅವ್ಯವಸ್ಥಿತ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

LEAVE A REPLY

Please enter your comment!
Please enter your name here

Hot Topics