ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ ಹೊಟೇಲ್ ಗೆ ನುಗ್ಗಿದ ಕಂಟೈನರ್: ನಾಲ್ವರ ಸಾವು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಹೊಟೇಲ್‌ಗೆ ನುಗ್ಗಿದ ಘಟನೆಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಗವಿಗಾನಹಳ್ಳಿ ನಿವಾಸಿಗಳಾದ ವಕೀಲ ಯಮುನಾಚಾರ್ , ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಗುಮಾಸ್ತ ಎಚ್.ವಿ.ವೆಂಕಟೇಶ್ , ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಬೆಂಗಳೂರಿನ ಬಾಣಸವಾಡಿ ನಿವಾಸಿ ಕಲಾಂಜಿಯಂ , ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಪುರದ ನಿವಾಸಿ ನಿತೇಶ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹರಿಯಾಣ ಮೂಲದ ಕಂಟೈನರ್ ಲಾರಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ನತ್ತ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು. ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ..