ಆಪಲ್ ಮೊಬೈಲ್ ಸೆಟ್ ಅಪ್‌ಡೇಟ್ ಕೊಟ್ಟರೆ ಸ್ಕ್ರೀನ್ ನಲ್ಲಿ ಲೈನ್, ಬ್ಲ್ಯಾಂಕ್ ಸಮಸ್ಯೆ. ಈ ಸಮಸ್ಯೆಗೆ ಸ್ಪಂದಿಸುವ ಬದಲು ಸರ್ವಿಸ್ ಸೆಂಟರ್ ನವರಿಂದ ಉಡಾಫೆ ವರ್ತನೆ. ನಾಳೆ ಆಪಲ್ ಐ ಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರಿಟೇಲರ್ಸ್ ಪ್ರತಿಭಟನೆ.
ಮಂಗಳೂರು: ಆಪಲ್ ಕಂಪೆನಿಯ ಮೊಬೈಲ್ ಫೋನ್ ಸೆಟ್ ನಲ್ಲಿ ಐಒಎಸ್ ಅಪ್‌ಡೇಟ್ ಮಾಡಿದಾಗ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದು, ಈ ಸಮಸ್ಯೆಗೆ ಆಪಲ್ ನ ಸರ್ವಿಸ್ ಸೆಂಟರ್ ನವರು ಯಾವುದೇ ರೀತಿಯ ಸ್ಪಂದನೆ ನೀಡದಿರುವ ಕಾರಣ ಇದೀಗ ಮೊಬೈಲ್ ಫೋನ್ ಮಾರಾಟ ಮಾಡುವ ಮಳಿಗೆಯವರೇ ಗ್ರಾಹಕರ ಪರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ದ.ಕ. ಮತ್ತು ಉಡುಪಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಸನಿನ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ. ಸುವರ್ಣ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಪ್ಟೆಂಬರ್ 17 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಜ್ಯೋತಿ ಜಂಕ್ಷನ್ ನಿಂದ ಹೊರಟು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಮುಂಭಾಗ ಮೂಲಕ ಸಾಗಿ ಕ್ಲಾಕ್ ಟವರ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಆಪಲ್ ಫೋನ್ ಸಮಸ್ಯೆ ಬಗ್ಗೆ ಗ್ರಾಹಕರು ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅಲ್ಲಿದ್ದವರಿಂದ ಉಡಾಫೆ ಉತ್ತರ ಲಭಿಸುತ್ತದೆ. ಇದು ಗ್ರಾಹಕರಿಗೆ ಆಘಾತ ಉಂಟು ಮಾಡಿದೆ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು. ‘ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸಲಿದ್ದಾರೆ. ಹಲವು ಮಂದಿ ನೊಂದ ಗ್ರಾಹಕರು ಕೂಡಾ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಬಂದರೆ ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ ನಂತಹ ವಿದೇಶೀ ಕಂಪೆನಿಗಳು ಕೂಡಾ ಗ್ರಾಹಕರ ಹಿತರಕ್ಷಣೆಗೆ ನಿಲ್ಲಲಾರವು. ಕೇವಲ ಸ್ಥಳೀಯ ಅಂಗಡಿಗಳು ಮಾತ್ರ ಗ್ರಾಹಕರ ಹಿತರಕ್ಷಣೆಗೆ ಹಾಗೂ ಅವರ ಬೆಂಬಲಕ್ಕೆ ನಿಲ್ಲುವ ಪ್ರಮೇಯ ಬರಬಹುದು. ಹಾಗಾಗಿ ಮುಂದಿನ ಹಬ್ಬದ ದಿನಗಳಲ್ಲಿ ಗ್ರಾಹಕರು ಆದಷ್ಟು ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಿ ಸ್ಥಳೀಯರನ್ನು ಬೆಂಬಲಿಸ ಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಚೇರ್ ಮೆನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಮ್, ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ, ಉಪಾಧ್ಯಕ್ಷ ಅಝರ್ ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.