ಉಡುಪಿ: ಅಕ್ರಮ ಮನೆ ತೆರವು ವಿಚಾರದಲ್ಲಿ ಮಾತಿನ ಚಕಮಕಿ ತಾರಕ್ಕೇರಿ ತಳ್ಳಾಟ ನೂಕಾಟದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರ ಶರ್ಟು ಹರಿದ ಘಟನೆ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಇಂದು ನಡೆದಿದೆ.
ಶಿರ್ವ ಗ್ರಾಮ ಪಂಚಾಯತ್ ಕಚೇರಿಯ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಓ ಸಮ್ಮುಖದಲ್ಲಿ ತೆರವುಗೊಳಿಸಲಾಗಿತ್ತು.
ಮನೆ ತೆರವುಗೊಳಿಸಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಗ್ರಾಮ ಪಂಚಾಯತ್ ಪಿಡಿಒ ಜೊತೆ ಸಹ ಪ್ರತಿಭಟನಾಕಾರರ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ನಡೆಯುವ ವೇಳೆ ಮಾಜಿ ಸಚಿವರ ಶರ್ಟ್ ಹರಿದಿದೆ. ಸುದ್ದಿ ತಿಳಿದ ತಕ್ಷಣ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ.
ಈ ವೇಳೆ ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಕೃತ್ಯದಲ್ಲಿ ಬಿಜೆಪಿ ಕುಮ್ಮಕ್ಕಿದೆ ಎಂದು ಆರೋಪಿಸಿದ ಕಾಂಗ್ರೆಸ್ ಬಡವರಿಗೆ ಹಕ್ಕು ಪತ್ರ ಹಾಗೂ ಮನೆ ನೀಡಲು ಮಾಜಿ ಸಚಿವ ಸೊರಕೆ ಆಗ್ರಹಿಸಿದ್ದಾರೆ.
ಜೊತೆಗೆ ಕಟ್ಟಡ ತೆರವು ಮಾಡಿದ ಪಿಡಿಒ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.