Saturday, June 3, 2023

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಯು ಟಿ ಖಾದರ್ ಅವಿರೋಧ ಆಯ್ಕೆ

ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ಮಾಜಿ ಸಚಿವ ಯು ಟಿ ಖಾದರ್​ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಮಾಜಿ ಸಚಿವ ಯು. ಟಿ. ಖಾದರ್ ಫರೀದ್ ಅವಿರೋಧವಾಗಿ ಇಂದು ವಿಧಾನಸಭೆಯಲ್ಲಿ ಆಯ್ಕೆಯಾದರು.

ಹಂಗಾಮಿ ಸಭಾಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಾಗ ಸಭಾನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯು. ಟಿ. ಖಾದರ್ ಫರೀದ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.

ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಮುಖ್ಯಮಂತ್ರಿಯವರ ಪ್ರಸ್ತಾವವನ್ನು ಅನುಮೋದಿಸಿದರು.

ಬಳಿಕ ಸಭಾಧ್ಯಕ್ಷರು ಮಾತನಾಡಿ, ಮುಖ್ಯಮಂತ್ರಿ ಸೂಚಿಸಿರುವ ಹಾಗೂ ಉಪಮುಖ್ಯಮಂತ್ರಿ ಅನುಮೋದಿಸಿರುವ ಚುನಾವಣೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಹೇಳಿದರು.

ಆಗ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು. ಯು. ಟಿ. ಖಾದರ್ ಫರೀದ್ ಅವರು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಸಭಾಧ್ಯಕ್ಷರು ಘೋಷಿಸಿದರು.

ಬಳಿಕ ನೂತನ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸದಸ್ಯರು ಮೇಜು ಕುಟ್ಟಿ ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು.

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವಾನುಮತದಿಂದ ಆಯ್ಕೆಯಾದ ಖಾದರ್ ಅವರನ್ನು ಸಂಪ್ರದಾಯದಂತೆ ಸಭಾಧ್ಯಕ್ಷರ ಪೀಠದವರೆಗೂ ಕರೆತಂದರು.

ಆಗ ದೇಶಪಾಂಡೆ ಅವರು ನೂತನ ಸ್ಪೀಕರ್​ಗೆ ಪೀಠವನ್ನು ಬಿಟ್ಟುಕೊಟ್ಟು ಶುಭ ಹಾರೈಸಿ ನಿರ್ಗಮಿಸಿದರು.

LEAVE A REPLY

Please enter your comment!
Please enter your name here

Hot Topics