ಉಡುಪಿ: ಇಂದು ಉಡುಪಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬಳಿ “ದೇಶದಲ್ಲಿ ಶೀಘ್ರ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ” ಗುರುಪುರ ಮಠದ ವಜ್ರದೇಹಿ ಶ್ರೀ ಒತ್ತಾಯಿಸಿದರು.
ಇಂದು ಉಡುಪಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಉಡುಪಿಯ ಬಿಜೆಪಿಯ ಬೂತ್ ಮಟ್ಟದ ಸಮಾವೇಶಕ್ಕೂ ಮೊದಲು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಈ ವೇಳೆ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಂಗಣದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದ ಮಠಾಧೀಶರೊಂದಿಗೆ ನಡ್ಡಾ ಅವರು ಸೌಹಾರ್ದ ಸಮಾಲೋಚನೆ ನಡೆಸಿದ ಹತ್ತು ಅಂಶಗಳ ಪತ್ರವನ್ನು ಪೇಜಾವರ ಶ್ರೀಗಳು ನಡ್ಡಾರವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ವಜ್ರದೇಹಿ ಶ್ರೀ “ಭಾರತವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿದೆ. ಸದ್ಯ ದೇಶಾದ್ಯಂತ ನಡೆಯುತ್ತಿರುವ ಬೆಳವಣಿಗೆ, ಸ್ಥಿರ ಸರ್ಕಾರ ಅಭಿವೃದ್ದಿ ಕಾರ್ಯಕ್ರಮಗಳಿಂದ ಸನಾತನ ಧರ್ಮ ಅತ್ಯಂತ ವೇಗವಾಗಿ ಪಸರಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು ಅತ್ಯಂತ ಶೀಘ್ರವಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ನಡ್ಡಾ “ಉಡುಪಿ ಭೇಟಿ ಹಾಗೂ ಇಷ್ಟು ಜನ ಸಂತರೊಂದಿಗೆ ಸಮಾಲೋಚನೆ ನಡೆಸಿ ಧನ್ಯತೆ ಉಂಟಾಗಿದೆ. ಸಂತರ ಆಶೀರ್ವಾದ ಮಾರ್ಗದರ್ಶನಗಳೊಂದಿಗೆ ಬಿಜೆಪಿ ಯಾವತ್ತೂ ಮುನ್ನಡೆಯುತ್ತದೆ” ಎಂದರು .