ಉಳ್ಳಾಲ : ಕೊಣಾಜೆ ದೇರಳಕಟ್ಟೆ ಸಮೀಪದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಲವ- ಕುಶ ಜೋಡುಕರೆ ನರಿಂಗಾನ ಜೋಡುಕರೆ ಕಂಬಳೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ್ದರು.
ಸಿಎಂ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ಸಿಎಂ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಸಭಾ ಕಾರ್ಯಕ್ರಮವನ್ನು ಸಿಎಂ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೃಷಿಕರಿಗೆ ಪ್ರಾಣಿಗಳೊಂದಿಗೆ ಅವಿನಾಭಾವ ಸಂಬಂಧ ಇದೆ. ಇದೇ ಕಾರಣಕ್ಕೆ ಈ ಕಂಬಳ ಅದ್ದೂರಿಯಿಂದ ಪ್ರೀತಿಯಿಂದ ನಡೆಯುತ್ತಿದೆ. ಕೋಣಗಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕುತ್ತಾರೆ. ಇದೇ ಕಾರಣಕ್ಕೆ ಕರಾವಳಿಯಲ್ಲಿ ಕಂಬಳ ವಿಶೇಷವಾಗಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರ ಗಂಭಿರವಾಗಿ ಪರಿಗಣಿಸಲಿದೆ ಎಂದರು.
ಜಾತ್ಯಾತೀತ ಕಂಬಳ ಎಂದ ಸಿಎಂ
ಜಾತ್ಯಾತೀತವಾಗಿ ಕಂಬಳವನ್ನು ನಡೆಸಲಾಗಿದೆ. ನಾವೆಲ್ಲರೂ ಸಹೋದರರಂತೆ, ಪ್ರೀತಿ ವಾತ್ಯಲ್ಯದಿಂದ ಸಮಾಜವನ್ನು ಕಟ್ಟೋಣ. ಸ್ಥಳೀಯ ಶಾಸಕ ಖಾದರ್ ಅವರು ಸರ್ವಧರ್ಮವನ್ನು ಒಗ್ಗೂಟಿಸಿಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಖಾದರ್ ಮೊದಲು ಸ್ಪೀಕರ್ ಸ್ಥಾನವನ್ನು ಒಪ್ಪಿರಲಿಲ್ಲ. ನಾನು ಕರೆದು ಮನವೊಲಿಸಿದೆ. ಶಿಷ್ಟಾಚಾರ ಪ್ರಕಾರ ಅವರು ನನಗಿಂತ ಎತ್ತರದ ಸ್ಥಾನದಲ್ಲಿದ್ದಾರೆ ಎಂದರು. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಈ ಕುರ್ಚಿಯಲ್ಲಿ ನಾವು ಕುಳಿತುಕೊಳ್ಳಲು ಸಾಧ್ಯ ಎಂದರು.
ಸಣ್ಣ ಅವಧಿಯಲ್ಲಿ ದೊಡ್ಡ ಅನುದಾನ: ಯು ಟಿ ಖಾದರ್
ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಮಂಗಳೂರು ಕ್ಷೇತ್ರಕ್ಕೆ ಸಣ್ಣ ಅವಧಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಸರಕಾರ ನೀಡಿದೆ. ನಾನು ಸ್ಪೀಕರ್ ಆಗಿರುವ ಕಾರಣದಿಂದಲೇ ಇಷ್ಟು ದೊಡ್ಡ ಅನುದಾನ ಬರಲು ಸಾಧ್ಯವಾಗಿದೆ ಎಂದರು.
ಕೋಣಗಳ ಮೈಸವರಿದ ಸಿಎಂ
ಇನ್ನು ಮುಖ್ಯಮಂತ್ರಿಗಳು ಮಂಜೊಟ್ಟಿಗೆ ಆಗಮಿಸಿ ಕೋಣಗಳ ಮೈಸವರಿ ಪುಳಕಿತಗೊಂಡರು. ಖಾದರ್ ಅವರು ಮುಖ್ಯಮಂತ್ರಿಗೆ ಕಂಬಳದ ಬೆಳ್ಳಿನೊಗ ಮತ್ತು ಬೆಳ್ಳಿಯ ಕಂಬಳ ಬೆತ್ತ ನೀಡಿದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್, ಕಾಸರಗೋಡು ಸಂಸದ ಉಣ್ಣಿತ್ತಾನ್, ಶಾಸಕ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಐವನ್ ಡಿ ಸೋಜಾ, ಮಿಥುನ್ ರೈ, ಎಂಎಲ್‌ಸಿ ಡಾ ಮಂಜುನಾಥ ಭಂಡಾರಿ, , ಪದ್ಮರಾಜ್ ಆರ್, ರಮಾನಾಥ ರೈ, ಮಮತಾ ಗಟ್ಟಿ, ಹರೀಶ್ ಶೆಟ್ಟಿ, ರಮಾನಾಥ ರೈ, ಶಕುಂತಲಾ ಶೆಟ್ಟಿ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ವಿಜಯ್ ಕುಮಾರ್ ಕಂಗಿನಮನೆ, ಇನಾಯತ್ ಆಲಿ ಮೊದಲಾದವರಿದ್ದರು
ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಮೃತಪಟ್ಟ ಮಗು. ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಕಂದಮ್ಮನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಯಿತು.
ಆದಿತ್ಯವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. ಊರಿಗೆ ಬಂದಿದ್ದ ತಂದೆ ಅನ್ವರ್ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.
ಮಂಗಳೂರು : ಪಿಲಿಕುಳ ಜೈವಿಕ ಪಾರ್ಕ್ ಸಮೀಪ ಕಂಬಳಕ್ಕೆ ಅವಕಾಶ ನೀಡಬಾರದು ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೊರಗೂ ಕಂಬಳ ನಿಷೇಧ ಮಾಡಬೇಕು ಎಂದು ಪ್ರಾಣಿ ದಯಾ ಸಂಘಟನೆ ಪೇಟಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಜನವರಿ 21 ಕ್ಕೆ ಮುಂದೂಡಿತು.
ಶುಕ್ರವಾರ ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ| ಎಂ.ಐ. ಅರುಣ್ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಬಂದ ಸಂದರ್ಭದಲ್ಲಿ ರಾಜ್ಯ ಸರಕಾರದ ಪರ ಹಾಜರಾದ ವಕೀಲರು, ಅಡ್ವೋಕೇಟ್ ಜನರಲ್ ಅವರು ಇಂದು ಲಭ್ಯರಿಲ್ಲ. ಹಾಗಾಗಿ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಜ.21 ಕ್ಕೆ ಮುಂದೂಡಿದೆ.
ತಪಸ್ಯ ಫೌಂಡೇಷನ್ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿದೆ 2025 ರ ಬೀಚ್ ಫೆಸ್ಟಿವಲ್ ಮಂಗಳೂರಿನ ತಣ್ಣೀರುಬಾವಿಯಲ್ಲಿ ಆಯೋಜಿಸಲಾಗಿದೆ. ಜನವರಿ 31 ರಿಂದ ಫೆಬ್ರವರಿ 2 ರ ತನಕ ಈ ಬೀಚ್ ಫೆಸ್ಟಿವಲ್ ನಡೆಯಲಿದ್ದು, ಹಲವಾರು ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.
ಅದರಲ್ಲಿ ಪ್ರಮುಖವಾಗಿ ಕೃಷಿ ಮೇಳವು ಒಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಸಹಾಯ ಆಗುವಂತಹ ಮಾಹಿತಿಗಳು ಸಿಗಲಿದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಇಳುವರಿ ಗಳಿಕೆ ಹಾಗೂ ಬೆಳೆ ಅಭಿವೃದ್ದಿಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಕೃಷಿ ಮಣ್ಣಿನ ಆರೋಗ್ಯ ನಿರ್ವಹಣೆ, ನೀರಿನ ನಿರ್ವಹಣೆ, ಕೃಷಿ ಯಂತ್ರದ ಮಾಹಿತಿ, ಪಶು ಸಂಗೋಪನೆ ಮತ್ತು ಕೋಳಿ ಸಾಕಣಿಕೆಯ ಮಾಹಿತಿ, ಕೃಷಿ ವ್ಯಾಪಾರ ಮತ್ತು ಮಾರುಕಟ್ಟೆ, ಅರಣ್ಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು, ಆರ್ಥಿಕ ನಿರ್ವಹಣೆ ಮತ್ತು ಸರ್ಕಾರದ ಯೋಜನೆಗಳು, ಜೇನು ಸಾಕಾಣಿಕೆ, ಅಣಬೆ ಕೃಷಿ, ಮೀನುಗಾರಿಕೆ ಮತ್ತು ಜಲಕೃಷಿ ಹಾಗೂ ಕೃಷಿಯಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯ ಬಗ್ಗೆ ಮಾಹಿತಿ ಸಿಗಲಿದೆ.
ಬೀಚ್ ಉತ್ಸವದಲ್ಲಿ ನಡೆಯಲಿರುವ ಅತಿ ದೊಡ್ಡ ಕೃಷಿಮೇಳದಲ್ಲಿ ಎಲ್ಲರೂ ಭಾಗವಹಿಸುವಂತೆ ತಪಸ್ಯ ಫೌಂಡೇಷನ್ ಹಾಗೂ ಜಿಲ್ಲಾಡಳಿತ ಮನವಿ ಮಾಡಿದೆ.