ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ನಾಳೆ ಸಂಜೆ ತಜ್ಞರ ಸಮಿತಿ ಜೊತೆ ಸಭೆ ನಡೆಸಲಿದ್ದು,
ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಮತ್ತು ಒಮಿಕ್ರಾನ್ ಎರಡನ್ನೂ ಕೂಡ ನಾವು ಗಮನಿಸುತ್ತಿದ್ದೇವೆ. ನೆರೆ ರಾಜ್ಯಗಳಲ್ಲಿ ಬಹಳ ವೇಗದಲ್ಲಿ ಸೋಂಕು ಹರಡುತ್ತಿದೆ.
ಹೀಗಾಗಿ ತಜ್ಞರ ಸಮಿತಿ ಜೊತೆ ಒಂದು ಸಭೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಳೆ ಸಂಜೆಯೇ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.
ನಮಗೆ ಈ ಹಿಂದೆ ಎರಡು ಅಲೆಗಳನ್ನು ಎದುರಿಸಿರುವ ಅನುಭವದ ಹಿನ್ನೆಲೆಯಲ್ಲಿ ಆದಷ್ಟು ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕೊರೊನಾ ನಿಯಂತ್ರಣ ಮಾಡಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಒಂದು ಸೂಚನೆ ಕೊಡಿ ಎಂದು ತಜ್ಞರಿಗೆ ಹೇಳಿದ್ದೇನೆ. ನಾಳೆ ಅವರು ಏನು ಹೇಳುತ್ತಾರೆ ನೋಡೋಣ ಎಂದರು.
ಎರಡು ಬಾರಿ ನಮಗೆ ಕೊರೊನಾ ಅನುಭವವಾಗಿದೆ. ಹಾಗಾಗಿ ಜನತೆ ಈಗ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು, ಕೋವಿಡ್ ಮಾರ್ಗಸೂಚಿ ಕುರಿತ ಆದೇಶಗಳನ್ನು ಸ್ವಯಂ ಪಾಲನೆ ಮಾಡಬೇಕು.
ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆರೋಗ್ಯದ ಸುರಕ್ಷತೆ ಬಗ್ಗೆ ಗಮನ ಕೊಡುವ ಕೆಲಸವನ್ನು ಜನತೆ ಮಾಡಬೇಕು ಎಂದು ಸಿಎಂ ತಿಳಿಸಿದರು.
ಕಾಂಗ್ರೆಸ್ ಈಗ ಮೇಕೆದಾಟು ಪಾದಯಾತ್ರೆ ಮಾಡಲು ಹೊರಟಿದೆ. ಅವರು ಏನೇನು ಮಾಡುತ್ತಿದ್ದಾರೆ ಎಂದು ನಾನು ಗಮನಿಸುತ್ತಿದ್ದೇನೆ, ನಾಳೆ ಸಭೆಯಲ್ಲಿ ಸಾರ್ವತ್ರಿಕವಾಗಿ ಯಾವ ರೀತಿ ನಡವಳಿಕೆಗಳು ಆಗಬೇಕು ಎನ್ನುವುದನ್ನು ಎಲ್ಲರಿಗೂ ಅನ್ವಯಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ನಾಳೆ ಅದರ ಬಗ್ಗೆ ಸಂಪೂರ್ಣವಾಗಿ ಚರ್ಚೆಯಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೇಕೆದಾಟು ಪಾದಯಾತ್ರೆ ಭವಿಷ್ಯ ಸಂಪುಟದಲ್ಲಿ ನಿರ್ಧರಿಸುವ ಸುಳಿವು ನೀಡಿದರು.