ಬೆಂಗಳೂರು: ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಶನಿವಾರ ಅಪರಾಹ್ನ ಘೋಷಿಸಿದರು.
ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಕಳಿಸುತ್ತೇನೆ.
ಅವರು ಅದನ್ನು ಕೊಟ್ಟು ರಾಜೀನಾಮೆ ಅಂಗೀಕಾರ ಮಾಡಬಹುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು. ಕಾಂಗ್ರೆಸ್‌ನ ಕಾರ್ಯಕರ್ತರಿಗೂ ಧನ್ಯವಾದ.
ರಾಜ್ಯದ ದೃಷ್ಟಿಯಿಂದ ಹಾಗೂ ಸ್ವಾಭಿಮಾನದ ಕಾರಣಕ್ಕಾಗಿ ಎಂಎಲ್‌ಸಿ ಸ್ಥಾನ ತ್ಯಜಿಸುವ ಹಾಗೂ ಕಾಂಗ್ರೆಸ್ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟರು.
ಅನೇಕ ಜನ ನನ್ನ ಜೊತೆ ಬರುತ್ತಿದ್ದಾರೆ ಎಂದು ಹೇಳಿದ ಇಬ್ರಾಹಿಂ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಜೊತೆ ಚರ್ಚೆ ಮಾಡಿ ಮುಂದಿನ ನಡೆಯನ್ನು ಪ್ರಕಟಿಸುತ್ತೇನೆ. ಮುಂದಿನ ಹೆಜ್ಜೆ ಏನೆಂಬುದನ್ನು ಇನ್ನೆರೆಡು ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.