ಭಿಕ್ಷುಕ ಶಿವಲಿಂಗು ಅವರ ಅಂಗರಕ್ಷ ನಾಗಿರುವ ಚುಮ್ಮಿ ಟಾಮಿ ಶ್ವಾನಗಳು:
ಮಂಗಳೂರು: ಬಾಲ್ಯದಲ್ಲೇ ಕಾಡಿದ ಪೊಲೀಯೋ ಈತನ ನಡೆದಾಡುವ ಸಾಮರ್ಥ್ಯವನ್ನು ಕಸಿದುಕೊಂಡು ಬಿಟ್ಟಿತು. ನಗರವಿಡೀ ಭಿಕ್ಷೆ ಬೇಡಿ ಹಣ ಸಂಪಾದಿಸುತ್ತಾನೆ. ದಾರಿಯುದ್ದಕ್ಕೂ ತಳ್ಳು ಗಾಡಿ ಮೇಲೆ ಹೋಗುತ್ತಿದ್ದರೆ..ಈತನನ್ನು ಟಾಮಿ ಚುಮ್ಮಿ ಅನ್ನೋ ಶ್ವಾನಗಳು ಕಾಯುತ್ತವೆ…ಅರೇ ಇದೇನಿದು ಹೊಸ ಕಥೆ ಅಂತೀರಾ…ಇದು ಕಥೆ ಅಲ್ಲ, ರಾಯಚೂರಿನ ಶಿವಲಿಂಗುವಿನ ಬದುಕಿನ ವ್ಯಥೆಯ ಕಥೆ…….
ತಳ್ಳು ಗಾಡಿ ಮೇಲೆ ಹೋಗುತ್ತಾ ಜನರ ಮುಂದೆ ಕೈಯೊಡ್ಡಿ ಭಿಕ್ಷೆ ಬೇಡುವ ಈತನ ಹೆಸರು ಶಿವಲಿಂಗ. ಮೂಲತಃ ರಾಯಚೂರು ಜಿಲ್ಲೆಯ ಈತ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ 10 ವರ್ಷಗಳಿಂದ ಬದುಕಿನ ಬಂಡಿ ಕಟ್ಟುತ್ತಿದ್ದಾರೆ.
ತಳ್ಳುಗಾಡಿಯಲ್ಲಿ ಸಾಗುತ್ತಾ, ಕಂಡವರ ಮುಂದೆ ಕೈಯೊಡ್ಡಿ ಭಿಕ್ಷೆ ಬೇಡುತ್ತಾನೆ. ಹಾಗಂತ ಸಿಕ್ಕಿದ ಹಣವನ್ನು ತನ್ನ ಖರ್ಚಿಗೆ ಉಪಯೋಗಿಸುವುದಿಲ್ಲ. ತನ್ನ ಸಹೋದರನಿಗೆ ಇಂಜಿನಿಯರಿಂಗ್ ಕಲಿಸುತ್ತಿದ್ದಾನೆ. ಇಲ್ಲೂ ಒಂದು ಇಂಟರೆಸ್ಟಿಂಗ್ ಕಥೆ ಇದೆ…. ಈ ಶಿವಲಿಂಗನ ಬಾಡಿಗಾರ್ಡ್‌ಗಳೇ ಈ ಎರಡು ನಾಯಿಗಳು..
ಮನೆಗೆ ಇವರೇ ಹಿರಿಯ ಮಗ. ಇನ್ನೊಬ್ಬ ಸಣ್ಣ ತಮ್ಮ. ಕುಟುಂಬಕ್ಕೆ ಆಧಾರವಾದ ಸ್ಥಂಭವಾಗಬೇಕಾಗಿದ್ದ ಶಿವಲಿಂಗುವಿಗೆ ಪೊಲೀಯೋ ಹೊಡೆದಾಗ ದಿಕ್ಕೆ ತೋಚದಂತಾಗಿತ್ತು. ಕುಟುಂಬ ನಿರ್ವಹಣೆ ಜೊತೆಗೆ ಸಹೋದರನಿಗೆ ಚೆನ್ನಾಗಿ ಕಲಿಸಬೇಕೆಂಬ ಹಂಬಲ. ಇದಕ್ಕಾಗಿ ಆರಿಸಿಕೊಂಡಿದ್ದು ಭಿಕ್ಷೆ ಬೇಡುವುದನ್ನು ಎನ್ನುತ್ತಾನೆ ಶಿವಲಿಂಗ.
ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲೇ ನೆಲೆಸಿರುವ ಇವರಿಗೆ ಈ ಎರಡು ಮುದ್ದಾದ ನಾಯಿಗಳೇ ಬಂಧು ಬಳಗ. ಮಾತ್ರವಲ್ಲ ಇವರ ರಕ್ಷಣೆಗೆ ಬೆಂಗಾವಲಾಗಿ ನಿಂತಿರುವುದು ಒಂದು ಹೆಣ್ಣು ನಾಯಿ ಚುಮ್ಮಿ , ಮತ್ತೊಂದು ಗಂಡು ನಾಯಿ ಟಾಮಿ..ಇವುಗಳೇ ಈತನ ಬಾಡಿಗಾರ್ಡ್. ರಾತ್ರಿ ವೇಳೆ ಶಿವಲಿಂಗನ ಬಳಿ ಯಾರಾದರೂ ಬಂದರೆ ಅವರನ್ನು ಓಡಿಸುತ್ತವೆಂತೆ…ಎಂದು ತನ್ನ ನಾಯಿ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. ಇವರು ಎಲ್ಲೇ ಹೋದರೂ ನಾಯಿಗಳೆರಡೂ ಇವರ ರಕ್ಷಣೆಗಾಗಿ ಹಿಂಬಾಲಿಸಿಕೊಂಡು ಹೋಗುತ್ತವೆ..
ತನ್ನ ಹೊಟ್ಟೆ ತುಂಬದಿದ್ದರೂ ಶ್ವಾನಗಳ ಹೊಟ್ಟೆ ತುಂಬಿಸುವುದನ್ನು ಮಾತ್ರ ಶಿವಲಿಂಗ ತಪ್ಪಿಸುವುದಿಲ್ಲ. ಸದ್ಯ ಈ ವ್ಯಕ್ತಿ ಯೊಂದಿಗೆ ಶ್ವಾನಗಳೆರಡು ಸದಾ ಜತೆಯಾಗಿರುವ ವೀಡಿಯೋ ಸಾಮಾ ಜಿಕ ತಾಣದಲ್ಲಿ ವೈರಲ್ ಆಗಿದೆ. ನ್ಯಾಯ, ನಿಷ್ಠೆ ಮರೀಚಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಬಾಡಿಗಾರ್ಡ್‌ಗಳಂತೆ ಶಿವಲಿಂಗುವಿನೊಂದಿಗೆ ಸಾಗುವ ಶ್ವಾನ ಪ್ರೀತಿಗೆ ಯಾವ ಪದಗಳೂ ಸಿಗುತ್ತಿಲ್ಲ.