ಮಂಗಳೂರು/ಕೊಲ್ಕತ್ತಾ : ಭಾರತದಲ್ಲಿ ಲಕ್ಷಗಟ್ಟಲೆ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯದಲ್ಲೂ ಅದರದೇ ಆದ ವಿಶೇಷ ಆಚರಣೆಗಳಿವೆ. ಧಾರ್ಮಿಕ ಆಚರಣೆಗಳೂ ವಿಭಿನ್ನ ಆಗಿರುತ್ತವೆ. ಪ್ರಸಾದ ರೂಪದಲ್ಲಿ ದೇವಸ್ಥಾನಗಳಲ್ಲಿ ಅನ್ನ, ಪೊಂಗಲ್, ಲಡ್ಡು, ಪಂಚಕಜ್ಜಾಯ ಹೀಗೆ ನೀಡೋದು ಸಾಮಾನ್ಯ. ಆದ್ರೆ, ಇಲ್ಲೊಂದು ದೇಗುಲದಲ್ಲಿ ನೂಡಲ್ಸ್ ಅನ್ನು ಪ್ರಸಾದ ರೂಪದಲ್ಲಿ ನೀಡ್ತಾರೆ ಅಂದ್ರೆ ನೀವು ನಂಬಲೇಬೇಕು.
ಈ ಪುರಾತನ ದೇಗುಲದಲ್ಲಿ ಪ್ರಸಾದ ‘ನೂಡಲ್ಸ್’ :
ಸಾಮಾನ್ಯವಾಗಿ ನೂಡಲ್ಸ್ ಅಂದ್ರೆ ಚೈನೀಸ್ ಫುಡ್. ಅದನ್ನು ಈ ದೇವಾಲಯದಲ್ಲಿ ಪ್ರಸಾದವಾಗಿ ನೀಡ್ತಾರೆ. ಇದೊಂದು ಆಶ್ಚರ್ಯಕರ ಸಂಗತಿಯೂ ಹೌದು. ಪ್ರಸಾದ ರೂಪದಲ್ಲಿ ಲಡ್ಡು, ಪುಳಿಯೊಗರೆ ಸ್ವೀಕರಿಸೋರಿಗೆ ಇದು ಅಚ್ಚರಿ ಅಲ್ಲದೇ ಮತ್ತೇನು ಅಲ್ವಾ?
ಅಂದಹಾಗೆ, ಈ ದೇವಾಲಯ ಇರೋದು ಕೋಲ್ಕತ್ತಾದಲ್ಲಿ. ಇಲ್ಲಿನ ಕಾಳಿ ಮಾತಾ ದೇವಾಲಯದಲ್ಲಿ ಈ ಸಂಪ್ರದಾಯವಿದೆ. ಇಲ್ಲಿ ಪ್ರಸಾದ ರೂಪದಲ್ಲಿ ನೂಡಲ್ಸ್ ನೀಡಲಾಗುತ್ತೆ. ಕೊಲ್ಕತ್ತಾದಲ್ಲಿನ ಒಂದು ಸಣ್ಣ ಟ್ಯಾಂಗ್ರಾ ಪ್ರದೇಶದಲ್ಲಿ ಈ ಒಂದು ಸಂಪ್ರದಾಯ ಕಾಣಬಹುದಾಗಿದೆ. ವಿಶೇಷ ಅಂದ್ರೆ ಈ ಪ್ರದೇಶ ಚೀನಿ ಹಾಗೂ ಭಾರತದ ಸಂಸ್ಕೃತಿಗಳು ಒಂದಾಗಿ ಬೆರೆಯುವ ಸ್ಥಳವಾಗಿದೆ.
ಈ ದೇವಾಲಯದಲ್ಲಿ ಕಾಳಿ ದೇವಿ ಹಾಗೂ ಭಗವಾನ್ ಶಿವನ ಪ್ರತಿಮೆಗಳನ್ನು ಕಾಣಬಹುದಾಗಿದೆ. ಈ ಸ್ಥಳದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಇಲ್ಲಿ ವಿವಿಧ ಆಹಾರ, ಹೂವುಗಳು, ನೂಡಲ್ಸ್ ಮತ್ತು ಇತರ ಚೀನೀ ಭಕ್ಷಗಳನ್ನು ಅರ್ಪಿಸಲಾಗುತ್ತೆ.
ಈ ಕ್ಷೇತ್ರದ ಪ್ರತೀತಿ ಏನು?
ಬಹಳ ಹಿಂದೆ ದೊಡ್ಡ ಮರದ ಬಳಿ ಎರಡು ಕಲ್ಲುಗಳಿದ್ದವಂತೆ. ಜನರು ಪ್ರತಿದಿನ ಕುಂಕುಮವನ್ನು ಹಚ್ಚಿ ಪ್ರಾರ್ಥಿಸುತ್ತಿದ್ದರಂತೆ. ಒಮ್ಮೆ, ಈ ಪ್ರದೇಶದಲ್ಲಿ ವಾಸವಿದ್ದ ಚೀನಿ ಕುಟುಂಬವೊಂದರಲ್ಲಿ ಸಣ್ಣ ಬಾಲಕ ಅನಾರೋಗ್ಯಕ್ಕೆ ಒಳಗಾಗಿದ್ದನಂತೆ. ಆತ ಗುಣಮುಖರಾಗಲಿ ಎಂದು ಪೋಷಕರು ಈ ಕಾಳಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರಂತೆ. ಇದಾದ ಬಳಿಕ ಕೆಲವೇ ದಿನಗಳಲ್ಲಿ ಆತ ಅನಾರೋಗ್ಯದಿಂದ ಗುಣಮುಖನಾಗಿದ್ದ.
ಬಳಿಕ ಬಾಲಕ ಕುಟುಂಬವು ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿತು. ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಚೀನೀ ಸಮುದಾಯದ ಮಂದಿ ಹಣ ಒಟ್ಟು ಮಾಡಿ ದೊಡ್ಡ ದೇವಾಲಯ ನಿರ್ಮಿಸಿದರು. ಹೀಗಾಗಿ ಈ ಸ್ಥಳ ಎರಡು ಸಂಸ್ಕೃತಿಗಳ ಬೆಸೆಯುವ ಸ್ಥಳವಾಗಿದೆ. ಈ ದೇವಾಲಯದಲ್ಲಿ ಇಂದಿಗೂ ಚೈನೀಸ್ ಫುಡ್ ನೂಡಲ್ಸ್ ಅನ್ನೇ ಪ್ರಸಾದವಾಗಿ ಹಂಚಲಾಗುತ್ತದೆ.
ಇದನ್ನೂ ಓದಿ : ಕಾರು ಅಪಘಾತ; ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ ಯುವತಿಯರು
ಅಷ್ಟೇ ಅಲ್ಲ, ಇಲ್ಲಿ ದೀಪಾವಳಿ, ಹಬ್ಬಗಳ ಸಮಯದಲ್ಲಿ ಭಕ್ತರ ದಂಡೇ ಹರಿದು ಬರುತ್ತೆ. ದೀಪಾವಳಿ ವೇಳೆ, ಎಣ್ಣೆ ಹಚ್ಚಿ ಸುಗಂಧ ಭರಿತ ಕಾಗದವನ್ನು ಬೆಂಕಿಯಲ್ಲಿ ಸುಡುವ ಪದ್ದತಿಯಿದೆ. ಹಾಗೆಯೇ ಇಲ್ಲಿ ಮತ್ತೊಂದು ವಿಭಿನ್ನ ಸಂಸ್ಕೃತಿಯಿದ್ದು, ಸಾಮಾನ್ಯ ಭಂಗಿಯಲ್ಲಿ ದೇವರಿಗೆ ನಮಸ್ಕರಿಸುವ ಬದಲು ದೇವರಿಗೆ ಬೇರೆಯೇ ವಿಧಾನದಲ್ಲಿ ನಮಿಸುವ ಪದ್ದತಿಯಿದೆ.