ಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಅಯ್ಯಪ್ಪ ಭಕ್ತರಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
22 ವರ್ಷದ ಧರಣೀಶ್, 54 ವರ್ಷದ ನಿರಂಜನ್ ಸಿಂಗ್ ಮೃತರು ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡಪ್ಯಾಯಲಗುರ್ಕಿ ಬಳಿ ಈ ಅಪಘಾತ ಸಂಭವಿಸಿದೆ.
ಮೃತರಿಬ್ಬರನ್ನು ಆಂಧ್ರ ಮೂಲದ ಗುಂತಕಲ್ ನಿವಾಸಿಗಳೆಂದು ಗುರುತಿಸಲಾಗಿದೆ.
ಪ್ರಕರಣದ ವರದಿ:
ಕೇರಳದ ಶಬರಿಮಲೆಯಿಂದ ಆಂಧ್ರಕ್ಕೆ ವಾಪಾಸ್ಸಾಗುತ್ತಿದ್ದು ಈ ವೇಳೆ ಮಾರ್ಗ ಮಧ್ಯೆ ಕಾರು ಪಂಕ್ಚರ್ ಆಗಿತ್ತು. ಇದರಿಂದಾಗಿ ಕಾರು ಹೆದ್ದಾರಿ ಮಧ್ಯೆ ನಿಂತಿದ್ದು, ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು.
ಪಂಕ್ಚರ್ ಆದ ಕಾರಿನಿಂದ ನಾಲ್ವರು ಕೆಳಗೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಲ್ಲೇ ನಿದ್ದೆ ಮಾಡುತ್ತಿದ್ದು, ಧರಣೀಶ್ ಸ್ಟೆಪ್ನಿ ಟೈರ್ ತೆಗೆದುಕೊಳ್ಳುವ ಸಲುವಾಗಿ ಡಿಕ್ಕಿ ತೆಗೆದು ಲಗೇಜ್ ಕೆಳಗೆ ಇಳಿಸಿಕೊಳ್ಳುತ್ತಿದ್ದ.
ಈ ವೇಳೆ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದಿರುವ ಕ್ಯಾಂಟರ್ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಿರಂಜನ್ ಸಿಂಗ್ ಹಾಗೂ ಧರಣೀಶ್ ಮೃತಪಟ್ಟಿದ್ದಾರೆ.
ಪೇರೇಸಂದ್ರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳನ್ನು ಸ್ಥಳಾಂತರಿಸಿ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ