ಉಡುಪಿ: ಕೋಳಿ ಕೇಳುವ ನೆಪದಲ್ಲಿ ಮನೆ ಗೇಟ್ ಬಳಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಕುತ್ತಿಗೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಕರಿಮಣಿಯನ್ನು ಎಳೆದು ಪರಾರಿಯಾಗಿರುವ ಘಟನೆ ಉಡುಪಿಯ ಪೆರ್ಡೂರಿನಲ್ಲಿ ನಡೆದಿದೆ.
ಉಡುಪಿಯ ಪೆರ್ಡೂರಿನ ನಿವಾಸಿ ಶೋಭಾ (50) ಕರಿಮಣಿ ಕಳೆದುಕೊಂಡ ಮಹಿಳೆ.
ನಿನ್ನೆ ಮಹಿಳೆಯ ಮನೆಯ ಬಳಿ ಒಬ್ಬ ಅಪರಿಚಿತ ವ್ಯಕ್ತಿ ಬೈಕಿನಲ್ಲಿ ಬಂದು ಮಹಿಳೆಯನ್ನು ಕರೆದು ಮಾರಾಟ ಮಾಡುವ ಕೋಳಿ ಇದೆಯ ಎಂದು ಕೇಳಿದ್ದಾನೆ. ಆಗ ಇವರು ಇಲ್ಲ ಎಂದು ಪ್ರತಿಕ್ರಿಯಿಸಿದ್ದು ನಂತರ ಆತ ಇನ್ನೆರಡು ಮನೆಯಲ್ಲಿ ಕೋಳಿ ಇದೆಯ ಎಂದು ಕೇಳಿ ಬರುತ್ತೇನೆ ಎಂದು ಹೇಳಿ ಬೈಕಿನಲ್ಲಿ ಹೋಗಿದ್ದ.
ಆದರೆ ಸ್ವಲ್ಪ ಸಮಯದ ನಂತರ ಮತ್ತೆ ವಾಪಾಸು ಬಂದ ಈತ ‘ಎಲ್ಲಿಯೂ ಕೋಳಿ ಸಿಗಲಿಲ್ಲ’ ಎಂದು ಹೇಳಿ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ ಕಾಯಿಯನ್ನು ಕೊಯ್ಯತ್ತಿದ್ದ. ಸಹಜವಾಗಿ ಕಾಣುತ್ತಿದ್ದ ಅತನಿಗೆ ಮಹಿಳೆ ಪ್ಲಾಸ್ಟಿಕ್ ಕವರ್ನ್ನು ನೀಡಿ ಮರದ ಪಕ್ಕದಲ್ಲೇ ನಿಂತಿದ್ದರು.
ಅ ಸಮಯ ಈತ ಹಿಂದಿನಿಂದ ಬಂದು ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 1,20,000 ಮೌಲ್ಯದ ಕರಿಮಣಿ ಸರವನ್ನು ಕೈಗಳಿಂದ ಎಳೆದು ತುಂಡು ಮಾಡಿ ಕಸಿದುಕೊಂಡು ಪರಾರಿಯಾಗಿದ್ದಾನೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.