ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ಕೋವಿಡ್ ಮೂರನೇ ಅಲೆಯು ಕೂಡ ಹೆಚ್ಚಾಗುತ್ತಿದೆ.
ಮುಖ್ಯವಾಗಿ ಈ ಸೋಂಕು ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುವ ಭೀತಿಯಿಂದಾಗಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ ಘಟಕವು ವಿಶೇಷ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ.
ಕೊರೋನಾ ವೈರಸ್ ಮಹಾಮಾರಿಯು ಹಿರಿಯ ನಾಗರಿಕರ ಮೇಲೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ ಕೋವಿಡ್ ಲಸಿಕೆ ಪಡೆದುಕೊಂಡ ನಂತರವೂ ಮೂರನೇ ಅಲೆಯಲ್ಲಿ ಈ ವರ್ಗದವರಿಗೆ ಕೊರೋನಾ ವೈರಸ್ ಬಂದಿದ್ದು ಅವರಿಗೆ ಹೆಚ್ಚಿನ ಆರೈಕೆ ನೀಡುವುದು ಅವಶ್ಯ.
ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಒಂಟಿತನ, ಭಾವನಾತ್ಮಕ ಖಿನ್ನತೆಗೆ ಒಳಪಡುವ ಸಾಧ್ಯತೆ ಇರುತ್ತದೆ. ಇ
ವರಿಗೆ ಪ್ರಯೋಜನವಾಗಲಿಯೆಂದು ನಿಂದನೆಗೊಳಪಟ್ಟವರು, ರಕ್ಷಣೆಯ ಅಗತ್ಯವಿರುವವರು ಮತ್ತು ಪಿಂಚಣಿ ಮತ್ತು ಕಾನೂನು ಸೇವೆಗಳ ಬಗ್ಗೆ ಮಾಹಿತಿ ಬೇಕಾದವರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡಬಹುದು.
ಸಮಾಜ ಕಾರ್ಯಕರ್ತರು ಸಲಹೆ, ಸೂಚನೆ -ಮಾರ್ಗದರ್ಶನ ಮತ್ತು ಬೆಮಬಲ ನೀಡುತ್ತಾ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡುತ್ತಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ರಾಧಾ ಮೂರ್ತಿ “ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 14567 ಭಾರತದ ವೃದ್ಧರ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಾಯದೊಂದಿಗೆ ಆ ಕ್ಷೇತ್ರದ ಕಾರ್ಯಕರ್ತರು ಮಾರ್ಗದರ್ಶನ ನೀಡುತ್ತಾರೆ.
ರಾಜ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾವಲಯವು ಜಾರಿಗೆ ತಂದಿರುವ ನವ್ಯ ಯೋಜನೆಯಾಗಿದ್ದು ಎಪ್ರಿಲ್ 2021ರಲ್ಲಿ ಪ್ರಾರಂಭವಾಯಿತು.
ಇಲ್ಲಿಯವರೆಗೆ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ ಘಟಕವು ಸಂಕಷ್ಟದಲ್ಲಿರುವ ಸುಮಾರು 15,669 ಹಿರಿಯ ನಾಗರಿಕರಿಗೆ ಸಹಾಯ ಮಾಡಿದೆ.
ಕರ್ನಾಟಕದಲ್ಲಿ ಸಹಾಯವಾಣಿಯನ್ನು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನಡೆಸುತ್ತಿದೆ” ಎಂದು ಹೇಳಿದ್ದಾರೆ.