ಮಂಗಳೂರು : ಚಂದ್ರಮಾನ ಯುಗಾದಿಯನ್ನು ಹೇಗೆ ಹೊಸ ವರ್ಷದ ಆರಂಭವನ್ನಾಗಿ ಆಚರಣೆ ಮಾಡ್ತಾರೋ ಅಂತೆಯೇ ಕೆಲವು ಕಡೆ ಸೌರಮಾನ ಯುಗಾದಿಯನ್ನು ಹೊಸ ವರ್ಷವನ್ನಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಸೌರಮಾನ ಯುಗಾದಿಯನ್ನು ಕರಾವಳಿ ಮತ್ತು ಕೇರಳ ಭಾಗದ ಜನರು ವಿಶೇಷ ಭಕ್ತಿಯಿಂದ “ಬಿಸು/ವಿಷು ಪರ್ಬ” ಎಂದು ಆಚರಿಸ್ತಾರೆ. ಇಂದು ಕೇರಳ ಹಾಗೂ ತುಳುನಾಡಿನಲ್ಲಿ ವಿಷು ಕಣಿಯಿಟ್ಟು, ಬಗೆ ಬಗೆ ಖಾದ್ಯಗಳನ್ನು ಮಾಡಿ ಕುಟುಂಬ ಸಮೇತರಾಗಿ ಭೋಜನವನ್ನು ಮಾಡ್ತಾರೆ..
ತುಳುನಾಡು ಹಾಗೂ ಕೇರಳದಲ್ಲಿ ಸೌರಮಾನ ಯುಗಾದಿ ಅಂದ್ರೆ ವಿಷು ಹಬ್ಬವನ್ನು ಆಚರಣೆ ಮಾಡ್ತಾರೆ. ಬಿಸು/ ವಿಷು ಹಬ್ಬದಂದು ತುಳುನಾಡಿನ ಜನತೆ ಬಹುಬೇಗ ಎದ್ದು, ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಬಾಳೆ ಎಲೆಯನ್ನು ಇಟ್ಟು ಒಂದು ಸೇರು ಕುಚ್ಚಲಕ್ಕಿ, ತೆಂಗಿನಕಾಯಿಯನ್ನು ಇಟ್ಟು ಅದರ ಅಕ್ಕಪಕ್ಕ ಹಿಂಗಾರ, ಬಾಳೆಹಣ್ಣು ವೀಳ್ಯದೆಲೆ, ಅಡಿಕೆ ಮತ್ತು ಇತರ ಫಲ ವಸ್ತುಗಳು, ಮನೆಯಲ್ಲೇ ಬೆಳೆದ ತರಕಾರಿಗಳನ್ನು ಇಟ್ಟು ಅದರ ಜೊತೆಗೆ ಕನ್ನಡಿಯನ್ನು ಇಡ್ತಾರೆ. ಇದನ್ನು ಹಿಂದಿನ ದಿನ ಸಂಜೆಯೇ ಮಾಡಲಾಗುತ್ತೆ. ಸಂಪ್ರದಾಯದ ಪ್ರಕಾರ ಮನೆಯ ಪ್ರತಿಯೊಬ್ಬ ಸದಸ್ಯನು ಬೆಳಗ್ಗೆ ಬೇಗ ಎದ್ದು, ಕಣ್ಣು ಮುಚ್ಚಿಕೊಂಡು ಮನೆಯ ದೇವರ ಕೋಣೆ ಬಳಿಗೆ ಹೋಗಿ ಅಲ್ಲಿ ಕಣಿಯನ್ನು ಮೊದಲು ನೋಡಬೇಕು. ಇದ್ರಿಂದ ವರ್ಷವಿಡಿ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು.
ಹಾಗಾಗಿ ಕಣಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ. ಕಣಿಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ಹಳದಿ ಕಣಿ ಕನ್ನ ಹೂ, ಕಮ್ಮಶಿ, ಕಾಡಿಗೆ, ಅಕ್ಕಿ, ಲಿಂಬೆ, ಬಂಗಾರ ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು, ಒಂದು ಕನ್ನಡಿ, ಧಾರ್ಮಿಕ ಪುಸ್ತಕ, ಹತ್ತಿಯ ಧೋತಿ ಮತ್ತು ನಾಣ್ಯಗಳು ಹಾಗೂ ನೋಟುಗಳು ಇರುವುದು. ಈ ಎಲ್ಲಾ ವಸ್ತುಗಳನ್ನು ಅಗಲವಾದ ಒಂದು ಪಾತ್ರೆಯಲ್ಲಿ ಹಾಕಲಾಗುತ್ತದೆ. ಇದನ್ನು ಮಲಯಾಳದಲ್ಲಿ “ಉರುಳಿ” ಎಂದು ಕರೀತಾರೆ.
ಹಬ್ಬ ಅಂದ್ಮೇಲೆ ಊಟದ ತಯಾರಿನೂ ಕೂಡಾ ಹಾಗೇ ಇರ್ಬೇಕಲ್ವಾ? ಬಿಸು/ ವಿಷು ಹಬ್ಬದಂದು ಕೂಡಾ ಭಕ್ಷ-ಭೋಜನ ತಯಾರಾಗುತ್ತೆ. ಕೆಲವು ಮನೆಗಳಲ್ಲಿ ಮಾಂಸಾಹಾರ ಮಾಡುವುದಿದೆ. ಹೆಸರು ಮತ್ತು ಹಸಿ ಗೇರುಬೀಜದ ಪಲ್ಯ, ಹೆಸರು ಬೇಳೆಯ ಪಾಯಸ, ಮೂಡೆ, ಕೊಟ್ಟಿಗೆ, ಕಡುಬು ಇತ್ಯಾದಿ ತಿಂಡಿಗಳನ್ನ ಮಾಡಿ ನೆರೆಮನೆಯವರಿಗೂ ಸಹ ಉಣ ಬಡಿಸುವುದು ಸಂಪ್ರದಾಯ.
ತುಳುನಾಡಿನಲ್ಲಿ ಜನರು ಶುಭ ಕಾರ್ಯಗಳನ್ನು ಈ ದಿನದಂದೇ ಆರಂಭಿಸ್ತಾರೆ. ಹೊಸ ಮನೆಯ ಶಂಕುಸ್ಥಾಪನೆ, ಬೀಜ ಬಿತ್ತನೆ,, ಸಣ್ಣ ಮಕ್ಕಳಿಗೆ ಕಿವಿ ಚುಚ್ಚುವುದು, ಆಭರಣ ಖರೀದಿ ಇಂತಹ ಹಲವರು ಶುಭ ಕಾರ್ಯಗಳನ್ನು ಮಾಡ್ತಾರೆ. ಜೊತೆಗೆ ಹಳ್ಳಿಗಳಲ್ಲಿ ಕೋಳಿ ಅಂಕ, ಇದನ್ನು ಬಿಸು ಕಟ್ಟ ಅಂತಾನೂ ಕರೀತಾರೆ , ತೆಂಗಿನ ಕಾಯಿ ಕುಟ್ಟುವುದು, ಜಟ್ಟಿ ಕಾಳಗ ಇತ್ಯಾದಿ ಜಾನಪದ ಕ್ರೀಡೆಗಳೂ ಅಂದೇ ನಡೆಯುತ್ತವೆ.
ಈ ಮಾರ್ಡನ್ ಯುಗದಲ್ಲಿ ಇಂತಹ ಹಬ್ಬಗಳು ಇತ್ತಿಚೇಗೆ ನೆಲಕಚ್ಚಿ ಹೋಗ್ತಾ ಇವೆ.. ಆದ್ರೂ ಈ ಹಬ್ಬಗಳೆಲ್ಲಾ ನಮ್ಮ ಹಿರಿಯರು ನಮಗೆ ಕೊಟ್ಟಿರುವಂಥ ಬಳವಲಿ.. ಇದನ್ನು ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಬೇಕು. ಹಿರಿತಲೆಗಳು ಉಳಿಸಿಕೊಂಡು ಬಂದ ಈ ಸಂಪ್ರದಾಯ ಆಚಾರ-ವಿಚಾರ, ಹಬ್ಬ ಹರಿದಿನಗಳನ್ನು ನಾವೂ ಕೂಡಾ ಮುಂದುವರಿಸಬೇಕಾಗಿರುವುದು ನಮ್ಮ ಕರ್ತವ್ಯ. ಅದೇನೆ ಇರಲಿ ಮನೆ ಮನೆಯಲ್ಲಿ ಸಂಭ್ರಮ ಹರುಷ ತಂದಿರುವ ಈ ಯುಗಾದಿಯನ್ನು ಬೇವು-ಬೆಲ್ಲ ತಿಂದು ಸಿಹಿಗೆ ಹಿಗ್ಗದೆ ಕಹಿಗೆ ಕುಗ್ಗದೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸೋಣ.