ಸಿಸಿಬಿ ವಶದಲ್ಲಿದ್ದ ಕಾರು ಮಾರಾಟ ಪ್ರಕರಣ; ಆಂತರಿಕ ತನಿಖೆ ನಡೆಸಿ ವರದಿ ನೀಡಲು ಕಮಿಷನರ್ ಸೂಚನೆ..!
CCB seized car sales case; Commissioner instructs to conduct internal investigation..!
ಮಂಗಳೂರು:ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳ ಐಷಾರಾಮಿ ಕಾರು ಸಿಸಿಬಿ ಪೊಲೀಸರೇ ಮಾರಾಟ ಮಾಡಿದ ಆರೋಪದ ಕುರಿತು ಆಂತರಿಕ ತನಿಖೆಯನ್ನು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಅವರಿಗೆ ಜವಾಬ್ದಾರಿ ಹೊರಿಸಲಾಗಿದೆ.
ಐಷಾರಾಮಿ ಕಾರು ಮಾರಾಟ ಮಾಡಿದ ಆರೋಪವು ಬೆಳಕಿಗೆ ಬರುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್
ಕೂಡಲೇ ಈ ಪ್ರಕರಣವನ್ನು ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಗಾಂವ್ಕರ್ ಅವರಿಗೆ ಸೂಚನೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೊದಲ ಹಂತದ ವರದಿಯನ್ನು ಮೂರು ದಿನದೊಳಗೆ ನೀಡಿ ಬಳಿಕ ಕಮಿಷನರ್ ಅವರ ಮಾರ್ಗದರ್ಶನದಂತೆ ಪ್ರಕರಣದ ಹೆಚ್ಚುವರಿ ವರದಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಿಸಿಬಿ ಪೊಲೀಸರ ವಶದಲ್ಲಿದ್ದ ಹಾಗೂ ಆರೋಪಿಗಳಿಗೆ ಸೇರಿದ ಕಾರನ್ನು ಸಿಸಿಬಿ ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಘಟನೆಯ ಕುರಿತಾಗಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತನಿಖೆಗೆ ಸೂಚಿಸಿದ್ದರು. ಘಟನೆಯ ಸತ್ಯಾಸತ್ಯತೆ, ಹಿನ್ನೆಲೆಯನ್ನು ತಿಳಿಯಲು ಈಗಾಗಲೇ ಆಯುಕ್ತರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಸದ್ಯ ಪ್ರಕರಣದ ತನಿಖೆಯನ್ನು ಡಿಸಿಪಿ ವಿನಯ್ ಗಾಂವ್ಕರ್‌ಗೆ ವಹಿಸಲಾಗಿದೆ. ಕೇರಳ ಮೂಲದ ಆರೋಪಿಗಳ ವಂಚನಾ ಪ್ರಕರಣವನ್ನು ನಗರ ನಾರ್ಕೊಟಿಕ್ ಆ್ಯಂಡ್ ಎಕಾನಾಮಿಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ನಡೆಸುತ್ತಿದ್ದಾರೆ.
ವಂಚನೆ ಪ್ರಕರಣ, ಸೀಝ್ ಮಾಡಿರುವ ಕಾರುಗಳ ವಿವರ ಸೇರಿದಂತೆ ಪ್ರತಿಯೊಂದು ಸೂಕ್ಷ್ಮದ ಬಗ್ಗೆ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.