ಸುಳ್ಯ: ಕಾರು ಮತ್ತು ಸ್ಕೂಟರ್ ಪರಸ್ಪರ ಢಿಕ್ಕಿಯಾಗಿ ಅಣ್ಣ ತಂಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸುಳ್ಯದ ಎಲಿಮಲೆಯಲ್ಲಿ ನಡೆದಿದೆ.
ಕಡಪಾಲದ ನಿಶಾಂತ್ (17) ಹಾಗೂ ತಂಗಿ ಮೋಕ್ಷಾ (10) ಮೃತಪಟ್ಟ ಅಣ್ಣ ತಂಗಿ.
ನಿಶಾಂತ್ ಅವರು ಸ್ಕೂಟಿಯಲ್ಲಿ ಸುಳ್ಯದ ಕಡೆ ಹೋಗುತ್ತಿದ್ದಾಗ ಸುಳ್ಯದಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಾರುತಿ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈತ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ನಿಶಾಂತ್ ಹಾಗೂ ಮೋಕ್ಷ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳೀಯರು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ನಿಶಾಂತ್ ಸಾವನ್ನಪ್ಪಿದ್ದಾನೆ.
ತಂಗಿ ಮೋಕ್ಷಾಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಕೂಡಾ ಸಾವನ್ನಪ್ಪಿದ್ದಾಳೆ. ನಿಶಾಂತ್ ಸುಳ್ಯದ ಪಿಯುಸಿ ವಿದ್ಯಾರ್ಥಿಯಾಗಿದ್ದು ಮೋಕ್ಷಾ ಐದನೇ ತರಗತಿಯಲ್ಲಿ ಕಲಿಯುತ್ತಿದ್ದಳು.
ಎರಡು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.