Monday, August 15, 2022

ದ.ಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ಧರಣಿ

ಮಂಗಳೂರು : ಹಲವಾರು ವರ್ಷಗಳಿಂದ ದ.ಕ ಜಿಲ್ಲೆಯ ಜನರ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ಜನಾಂದೊಲನದ ಭಾಗವಾಗಿ ಗುರುವಾರ ಬೆಳಿಗ್ಗೆ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಿದ್ಯಾರ್ಥಿಗಳು ಧರಣಿಯನ್ನು ನಡೆಸಿದರು.
ಮುಸ್ಲಿಂ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಅಶ್ರಫ್ ಮೇಯರ್ “ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ಕೇವಲ ಕ್ಯಾಂಪಸ್ ಫ್ರಂಟ್ ನ ಹೋರಾಟವಲ್ಲ. ಇದು ಜಿಲ್ಲೆಯ ಜನತೆಯ ಹೋರಾಟವಾಗಿದೆ. ಇದು ಸಂಸದರು, ಶಾಸಕರ ನಿರ್ಲಕ್ಷ್ಯವಾಗಿದ್ದು, ಪ್ರತಿಯೊಂದು ಸಂಘಟನೆಯ ನಾಯಕರು ಈ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ.” ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿಯಾದ ಸವಾದ್ ಕಲ್ಲರ್ಪೆ ಅವರು “8 ಶಾಸಕರು, 7 ವಿಧಾನ ಪರಿಷತ್ತು ಸದಸ್ಯರು, 1 ಲೋಕಸಭಾ ಸದಸ್ಯ, 2 ರಾಜ್ಯ ಸಚಿವರು, 1 ಕೇಂದ್ರ ಸಚಿವೆ ಜಿಲ್ಲೆಯ ಇಷ್ಟು ಜನರು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಮೆಡಿಕಲ್ ಕಾಲೇಜು ಇಷ್ಟರವರೆಗೆ ಜಿಲ್ಲೆಗೆ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದಾದರೆ ಜಿಲ್ಲೆಯ ಜನತೆಯೊಂದಿಗೆ ಮಾಡುವ ಘೋರ ಅನ್ಯಾಯವಾಗಿದೆಯಿದು” ಎಂದು ನುಡಿದರು.
ಕ್ಯಾಂಪಸ್ ಫ್ರಂಟ್ ರಾಜ್ಯಧ್ಯಕ್ಷರಾದ ಅಥಾವುಲ್ಲಾ ಪುಂಜಾಲಕಟ್ಟೆ “ಖಾಸಗಿ ವೈದ್ಯಕೀಯ ಕಾಲೇಜುಗಳ ಅಟ್ಟಹಾಸವನ್ನು ನಿಲ್ಲಿಸಲು ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯು ಮುಂಚೂಣಿಯಲ್ಲಿದ್ದು, ಈ ಧರಣಿಯು ಹೋರಾಟದ ಮೊದಲ ಹಂತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಯನ್ನು ಸೇರಿಸಿ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ.” ಎಂದು ಎಚ್ಚರಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ ಅವರು “ಶಿಕ್ಷಣ ಮತ್ತು ಆರೋಗ್ಯ ವೆಂಬುದು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದ್ದು, ಈ ಎರಡರಲ್ಲೂ ಖಾಸಗೀಕರಣ ಸಲ್ಲದು. ದ.ಕ ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ಅತ್ಯಾವಶ್ಯಕವಾಗಿದ್ದು, ಈ ಹೋರಾಟದ ಮುಂದುವರಿಕೆ ಅನಿವಾರ್ಯವಾಗಿದೆ.” ಎಂದು ಹೇಳಿದರು. ಸಾಮಾಜಿಕ ಹೋರಾಟಗಾರರು ಹಾಗೂ ಬರಹಗಾರರಾದ ಇಸ್ಮತ್ ಫಜೀರ್ ಅವರು “ಇಂದು ಜಿಲ್ಲೆಯಲ್ಲಿ ವೈದ್ಯಕೀಯ ಸೀಟು ನೀಡುತ್ತಿರುವುದು ಶ್ರೀಮಂತಿಕೆಯ ಆಧಾರದಲ್ಲಿಯೇ ಹೊರತು ಅವರ ಸಾಮರ್ಥ್ಯದ ಆಧಾರಲ್ಲಿಯಲ್ಲ ಎಂಬುದು ವಿಷಾದನೀಯ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ಮುಖಾಂತರ ಜಿಲ್ಲೆಯ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಾಗಿದೆ” ಎಂದು ಹೇಳಿದರು.
ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಅವರು “ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕಬೇಕಾದರೆ ದ.ಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಅವಶ್ಯಕ.

ಲಕ್ಷ – ಕೋಟಿ ಫೀಸು ನೀಡಿ ವೈದ್ಯರಾದ ಜಿಲ್ಲೆಯ ಹಲವಾರು ಖಾಸಗಿ ವೈದ್ಯರುಗಳು ಇಂದು ಆರೋಗ್ಯ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡದೆ ಮತ್ತೇನು ಮಾಡ್ಯಾರು???” ಎಂದು ಹೇಳಿದರು. ಮಂಗಳೂರು ಜಿಲ್ಲಾಧ್ಯಕ್ಷರಾದ ಇನಾಯತ್ ಅಲಿ ಸ್ವಾಗತಿಸಿ ಕಾರ್ಯದರ್ಶಿ ಮುನೀರ್ ಬಜಾಲ್ ಧನ್ಯವಾದಗೈದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಪ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಿರಾಜ್ ಸುರತ್ಕಲ್, ಜಿಲ್ಲಾ ಮುಖಂಡರಾದ ಶರ್ಫುಧ್ಧೀನ್ ಬಜ್ಪೆ,ಅನ್ಸಾರ್ ಪುತ್ತೂರು, ಯಾಸೀನ್ ಬೆಳ್ತಂಗಡಿ, ಫಯಾಝ್ ವಿಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ನಿಧನ

ಹೊಸದಿಲ್ಲಿ: ದೇಶದ ಖ್ಯಾತ ಹೂಡಿಕೆದಾರ, ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾಗಿದ್ದಾರೆ. ಅವರು ಈ ಹಿಂದೆ ತಮ್ಮ ಸಿಂಪಲ್‌...

ಮಂಗಳೂರಿನಲ್ಲೇ ಹಾರುತಿಹುದು 70 ವರ್ಷ ಹಳೆಯದಾದ ಅಪ್ಪಟ ಖಾದಿ ತಿರಂಗಾ..!

ವಿಶೇಷ ವರದಿಮಂಗಳೂರು: ದೇಶಾದೆಲ್ಲೆಡೆ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮ. ಕಳೆದೆರಡು ದಿನಗಳಿಂದ ಎಲ್ಲರ ಮನೆ-ಮನಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಮಂಗಳೂರಿನ ಹಲವು ಕಟ್ಟಡಗಳು ರಾತ್ರಿ ವೇಳೆ ತಿರಂಗಾ ಬಣ್ಣದಲ್ಲಿ ಕಣ್ಮನ ಸೆಳೆಯುತ್ತಿದೆ.ಈ ಮಧ್ಯೆ ಮಂಗಳೂರಿನಲ್ಲೇ...

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್‌ನಲ್ಲಿ ವೆಲಂಕಣಿ ಮಾತೆಯ ಮೂರ್ತಿ ಮೆರವಣಿಗೆ

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ಚರ್ಚ್‌ನ 50ನೇ ವರ್ಷಾಚರಣೆ ಹಾಗೂ ಪುಣ್ಯಕ್ಷೇತ್ರ ಘೋಷಣೆಯ ಪ್ರಯುಕ್ತ ವೆಲಂಕಣಿ ಮಾತೆಯ ಪವಿತ್ರ ಮೆರವಣಿಗೆ ನಡೆಯಿತು. ಇದಕ್ಕೆ ಉಡುಪಿ ಶಾಸಕ ಕೆ. ರಘುಪತಿ ಭಟ್ ರವರು ಚಾಲನೆ...