ವಿಟ್ಲ: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಂಗಿಲಪದವು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆಯಲ್ಲಿ ಮಂಗಳೂರು ಅತ್ತಾವರ ಖಾಸಗಿ ಆಸ್ಪತ್ರೆಗೆ ಸೇರಿದ ಬಸ್ ಮಂಗಳೂರಿನ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಈ ವೇಳೆ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ವಾಲಿನಿಂತಿದೆ.
ಈ ವೇಳೆ ಬಸ್ಸಿನಲ್ಲಿದ್ದ ಮೂವರು ಸ್ಟಾಫ್ ನರ್ಸ್ ಮತ್ತು ಬೈಕ್ ಸವಾರ ಗಾಯಗೊಂಡಿದ್ದಾರೆ. ಎಲ್ಲರನ್ನೂ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ ಸುಮಾರು13 ಮಂದಿ ಪ್ರಯಾಣಿಸುತ್ತಿದ್ದರು. ಬೈಕ್ ಸವಾರ ಇರಂದೂರು ಪಡೀಲ್ ನಿವಾಸಿ ಜಾಕೀರ್ ಎಂದು ಗುರುತಿಸಲಾಗಿದೆ.
ಅಪಘಾತದಿಂದ ಬಸ್ ರಸ್ತೆ ಬದಿಯ ಮರದ ಬುಡದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದಲ್ಲಿ ಭಾರೀ ಪ್ರಪಾತ ಇದ್ದು, ಜೊತೆಗೆ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬವಿದ್ದು, ಅದೃಷ್ಟವಶಾತ್ ಹೆಚ್ಚಿನ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.