ನಾಯಿ ತೊಳೆಯಲು ಕಲ್ಲು ಕ್ವಾರಿಗಿಳಿದ ಅಣ್ಣ-ತಂಗಿಯ ದಾರುಣ ಸಾವು..!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ತಮ್ಮ ಮನೆಯ ಸಾಕು ನಾಯಿ ತೊಳೆಯಲು ಕಲ್ಲು ಕ್ವಾರಿಗಿಳಿದ ಅಣ್ಣ ತಂಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಬೆಂಗಳೂರು ನಗರದ ಬೆಟ್ಟ ಹಲಸೂರಿನ ಬಳಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಜೆನ್ನಿಫರ್ (17) ಪ್ರೇಮ್ ಕುಮಾರ್ (21) ಎಂದು ಗುರುತಿಸಲಾಗಿದೆ.
ಮನೆಯ ಸಾಕು ನಾಯಿಯನ್ನು ಅಣ್ಣ ತಂಗಿ ಇಬ್ಬರು ಸ್ನಾನ ಮಾಡಿಸಲು ಮನೆ ಸನಿಹದ ನೀರಿದ್ದ ಕಲ್ಲು ಕ್ವಾರಿ ಬಳಿ ಕೊಂಡೊಹೋಗಿದ್ದು, ಈ ವೇಳೆ ಆಯತಪ್ಪಿ ಜೆನ್ನಿಫರ್ ನೀರಿಗೆ ಬಿದ್ದು ಮುಳುಗಿದ್ದಾರೆ.
ಈ ಸಂದರ್ಭದಲ್ಲಿ ತಂಗಿ ಜೆನಿಫರ್ ನನ್ನು ಕಾಪಾಡಲು ಹೋದ ಅಣ್ಣ ಪ್ರೇಮ್ ಕುಮಾರ್ ಕೂಡ ನೀರಿಗೆ ಜಿಗಿದಿದ್ದು ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.