Breaking news : ಉಜಿರೆ ಬಾಲಕ ಅಪಹರಣ ಪ್ರಕರಣ ಸುಖಾಂತ್ಯ : ಕೋಲಾರದಲ್ಲಿ ಬಾಲಕನ ರಕ್ಷಣೆ..!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. 8 ವರ್ಷದ ಬಾಲಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಕಿಡ್ನಾಪ್ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಸೇರಿಸಿ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದಲ್ಲಿ ಕೋಲಾರದಲ್ಲಿ ಅವಿತು ಕೂತಿದ್ದ ಅಪಹರಣಕಾರರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಕೋಲಾರದ ಮಾಸ್ತಿ ಠಾಣೆಯಲ್ಲಿ ಆರೋಪಿಗಳಿದ್ದು ಬೆಳಗ್ಗೆ 11 ಗಂಟೆಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು ಬಳಿಕ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ :
ಉಜಿರೆಯ ಉದ್ಯಮಿಯೋರ್ವರ ಮಗನಾದ 8 ವರ್ಷದ ಅನುಭವ್ ನನ್ನು ಡಿ.17 ರಂದು ಸಂಜೆ ಉಜಿರೆಯ ಮನೆಯ ಬಳಿ ಅಜ್ಜನೊಂದಿಗೆ ವಾಕಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದರು. ಈ ಬಗ್ಗೆ ದೂರು ದಾಖಲು ಮಾಡಿದ್ದ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಅಪಹರಣಕಾರರು ಬಾಲಕನ ಬಿಡುಗಡೆಗೆ ಮೊದಲಿಗೆ 17 ಕೋ.ರೂ. ಗೆ ಬೇಡಿಕೆ ಇಟ್ಟಿದ್ದರು. ಆದರೆ ನಿನ್ಬೆನೆ ಳಗ್ಗೆ ತಮ್ಮ ವರಸೆ ಬದಲಾಯಿಸಿ 10 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು.ದ.ಕ. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಾಲಕ ಮನೆಗೆ ಭೇಟಿ ಮಾಡಿ ಮನೆಯವರೊಂದಿಗೆ ಚರ್ಚಿಸಿ, ತನಿಖೆಗೆ ಚುರುಕು ಮುಟ್ಟಿಸಿದ್ದರು. ಇದೀಗ ಕೊನೆಗೂ ಪೊಲೀಸರ ಸಕಾಲಿಕ ಕ್ರಮಗಳಿಂದ ಬಾಲಕನ ರಕ್ಷಣೆಯಾಗಿದೆ ಜೊತೆಗೆ ಆರು ಮಂದಿ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.