ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಹ್ಯಾಂಡ್ಲರ್‌ಗಳ ಅಣತಿಯಂತೆ ಶಾರೀಕ್‌ನನ್ನು ಮುಗಿಸಲು ಯತ್ನ ನಡೆಯುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.
ಶಾರೀಕ್ ಕೊಠಡಿ ಬಳಿ ಒಬ್ಬ ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ. ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜಿಸಲಾಗಿದೆ.
ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಬಂದು ಹೋಗುವರರ ಮೇಲೆ ನಿಗಾ ಇರಿಸಲಾಗಿದೆ. ಗಂಭೀರ ಸುಟ್ಟಗಾಯದಿಂದ ದಾಖಲಾಗಿರುವ ಶಂಕಿತ ಉಗ್ರ ಶಾರೀಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.
ಆತನಿಗೆ ಅಳವಡಿಸಲಾದ ವೆಂಟಿಲೇಟರ್ ತೆಗೆಯಲಾಗಿದೆ. ಹೊಗೆ ತುಂಬಿಕೊಂಡು ಚೆಸ್ಟ್ ಇನ್‌ಫೆಕ್ಷನ್‌ನಿಂದ ಶಾರೀಕ್ ಬಳಲುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಾರೀಕ್ ಚೇತರಿಸಿಕೊಳ್ಳುತ್ತಿದ್ದು, ಈವರೆಗೆ ಆತನ ವಿಚಾರಣೆ ನಡಸಲು ನಮಗೆ ಸಾಧ್ಯವಾಗಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸ್ಪೋಟದ ಬೆನ್ನಲ್ಲೇ ಈ ಬಗ್ಗೆ ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮುಖ್ಯಸ್ಥ ಝಾಕೀರ್ ನಾಯಕ್ ಟ್ವೀಟ್ ಮಾಡಿದ್ದಾನೆ. ಸ್ಫೋಟ ನಡೆದ 1 ನಿಮಿಷ 45 ಸೆಕೆಂಡಿನ ಬಳಿಕ ಝಾಕೀರ್ ನಾಯ್ಕ್ ಟ್ವೀಟ್ ಮಾಡಿದ್ದು, ‘ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದೆಯಾ?’ ಪ್ರಶ್ನಿಸಿದ್ದಾನೆ.
ಈ ಟ್ವೀಟ್ ಶಾರೀಕ್ ಝಾಕೀರ್ ನಾಯ್ಕ್ ಅನುಯಾಯಿ ಎಂಬ ಚರ್ಚೆಗೆ ಪುಷ್ಟಿ ನೀಡಿದೆ. ಆತ್ಮಾಹುತಿ ಬಾಂಬ್ ಬಗ್ಗೆ ಯೂಟ್ಯೂಬ್ ಖಾತೆಯಲ್ಲಿ ವೀಡಿಯೊ ಅಪ್‌ಲೋಡ್ ಮಾಡಿದ್ದು, ಅದರ ವಿಡಿಯೊ ಲಿಂಕ್‌ನ್ನು ಅಧಿಕೃತ ಟ್ವಿಟರ್ ಖಾತೆಯಲ್ಲಿ ಝಾಕೀರ್ ನಾಯ್ಕ್ ಪೋಸ್ಟ್ ಮಾಡಿದ್ದಾನೆ.
ಆರೋಪಿ ಶಾರೀಕ್ ಝಾಕೀರ್ ನಾಯ್ಕ್ ಭಾಷಣಗಳಿಂದ ಪ್ರಭಾವಿತನಾಗಿದ್ದ ಅಲ್ಲದೆ ಈತನ ಮೊಬೈಲ್‌ನಲ್ಲಿ ಝಾಕೀರ್ ನಾಯ್ಕನ ವೀಡಿಯೊಗಳು ಪತ್ತೆಯಾಗಿವೆ.