Friday, March 31, 2023

ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ‘ವಾಮಾಚಾರ’ದ ಕರಿಛಾಯೆ..!

ಮಂಗಳೂರು: ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ. ಕಂಬಳ ಇಂದು ಕೇವಲ ಕ್ರೀಡೆಯಾಗಿರದೆ ಕೆಲವರ ಪ್ರತಿಷ್ಠೆಯೂ ಹೌದು. ಪ್ರೀತಿಯಿಂದ ಸಾಕುವ ಕಂಬಳ ಕೋಣಗಳು ಮಾಲೀಕನಿಗೆ ಪಂಚ ಪ್ರಾಣ ಕೂಡ ಹೌದು.

ಆದರೆ ಇದೀಗ ಕಂಬಳ ಕೋಣಗಳ ಮೇಲೂ ಕರಿಛಾಯೆ ಆವರಿಸಿದೆ. ಕಿರಾತಕರು ಅನ್ಯರ ಕೋಣಗಳು ಗೆಲ್ಲಬಾರದು ಎನ್ನುವ ಕಾರಣಕ್ಕೆ ಪದಕ ಪಡೆಯುವ ಕೋಣಗಳಿಗೆ ಮಾಟಮಂತ್ರ ಮಾಡುವ ಮೂಲಕ ಹೀನ ಕೃತ್ಯಕ್ಕೂ ಕೈ ಹಾಕುತ್ತಿದ್ದಾರೆ.

ಇಂತಹುದೇ ಒಂದು ಘಟನೆ ಕಂಬಳದ ತವರೂರು ಈ ತುಳುನಾಡಿದ ಮಣ್ಣಿನಲ್ಲಿ ನಡೆದಿದೆ ಎನ್ನಲಾಗಿದೆ. ಮಾತುಬಾರದ ಮೂಕ ಪ್ರಾಣಿಯೊಂದು ಇದೀಗ ಕಂಬಳ ಓಟದಲ್ಲಿ ಓಡಾಡುವುದು ಬಿಡಿ, ಎದ್ದು ನಿಲ್ಲಲಾಗದ ದಯನೀಯ ಸ್ಥಿತಿಗೆ ತಲುಪಿದೆ.


ಮಂಗಳೂರು ನಗರದ ಪದವು ಕಾನಡ್ಕ ಡೋಲ್ಫಿ ಡಿ ಸೋಜಾ ಮತ್ತು ಡೆರಿಕ್ ಡಿ ಸೋಜಾ ಅವರ ಮಾಲಕತ್ವದ ದೂಜೆ ಮತ್ತು ಎರ್ಮುಂಡೆ ಕಂಬಳದ ಕರೆಗೆ ಇಳಿದರೆ ಪ್ರಶಸ್ತಿ ಗ್ಯಾರಂಟಿ. ಕಂಬಳ ಗದ್ದೆಯಲ್ಲಿ ಓಡುವ ಈ ಕೋಣಗಳನ್ನು ನೋಡುವುದೇ ಒಂದು ಚೆಂದ.
ಈ ಕೋಣಗಳು ಕಂಬಳದ ಹಗ್ಗ ಓಟದ ಹಿರಿಯ ವಿಭಾಗದಲ್ಲಿ ಸಾಧನೆ ಮಾಡಿದೆ. ದೂಜ ನೇಗಿಲು ವಿಭಾಗದಲ್ಲೂ ಪ್ರಶಸ್ತಿಗಳನ್ನು ನಿರಂತರ ಬಾಚಿದೆ.

ಆದರೆ ಅದ್ಯಾರೋ ಅಸೂಯೆಯಿಂದ ಕೂಡಿದ ಕಿರಾತಕರು ಈ ಕೋಣಗಳು ಸ್ಪರ್ಧೆಯಲ್ಲಿ ಭಾವಹಿಸಬಾರದು ಎಂದು ತಮ್ಮ ನೀಚ ಬುದ್ದಿ ತೋರಿಸಿದ್ದಾರೆ.

ಎರಡೂ ಕೋಣಗಳು ಮಲಗಿದ್ದಲ್ಲಿಂದ ಏದ್ದೇಳಲಾಗದ ಸ್ಥಿತಿಯಲ್ಲಿದ್ದು, ಅದರಲ್ಲಿ ದೂಜೆ ಕಳೆದ ಕೆಲ ಸಮಯದಿಂದ ಮಲಗಿದಲ್ಲೇ ಇದ್ದು ಎದ್ದೇಳದ ಸ್ಥಿತಿಯಲ್ಲಿದ್ದಾನೆ. ಈ ದೃಶ್ಯ ನೋಡಿದ್ರೆ ಕರುಳು ಚುರ್ ಅನ್ನುತ್ತೆ. ಯಾರೋ ಈ ಕೋಣಕ್ಕೆ ವಾಮಾಚಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಕೊಟ್ಟಿಗೆಯಲ್ಲಿ ನೂಲು, ಮದ್ದು ಹುಡಿ, ತಗಡು, ಮತ್ತಿತರ ಸಾಮಗ್ರಿಗಳು ಪತ್ತೆಯಾಗಿವೆ. ಬಾಯಿಬಾರದ ಇಂತಹ ಮೂಕ ಪ್ರಾಣಿ ಸ್ಪರ್ಧೆಯಲ್ಲಿ ಭಾಗವಹಿಸಬಾರದು ಎನ್ನುವ ಒಂದೇ ಕಾರಣಕ್ಕೆ ಇದನ್ನು ಮಾಡಿದ್ದಾರೆಂದು ಕಣ್ಣೀರಿಡುತ್ತಿದ್ದಾರೆ ಮಾಲಕ ಡೋಲ್ಫಿ ಡಿ ಸೋಜಾ.


ತಮ್ಮ ಭಾಗವಹಿಸುವಿಕೆಯ 10ನೇ ವರ್ಷದ ಓಟದಲ್ಲಿ ದೂಜೆ, ಎರ್ಮುಡೆ ಕೋಣಗಳು ಭಾಗವಹಿಸಿಲ್ಲ. ಈ ಎರಡರಲ್ಲಿ ದೂಜೆ ಸದ್ಯ ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿದೆ. ಪಶು ವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿದ್ದಾರೆ. ಇನ್ನೂ ಕೂಡಾ ವಾಂತಿಬೇಧಿ ನಿಂತಿಲ್ಲ.

ಸದ್ಯಕ್ಕೆ ಧರ್ಮಗುರುಗಳು ಬಂದು ಪ್ರಾರ್ಥನೆ ಮಾಡಿದ್ದು ಮಾಲೀಕರಿಗೆ ಧೈರ್ಯ ತುಂಬಿದ್ದಾರೆ. ಇದಲ್ಲದೆ ಗಂಟು, ಸೀಲು ಮತ್ತು ಮುನ್ನಾ ಎನ್ನುವ ಕೋಣಗಳು ಇವರ ಬಳಿ ಇವೆ.


ಸದ್ಯ ತಮ್ಮ ಕೋಣಗಳಿಗೆ ಆದ ಸ್ಥಿತಿ ಕಂಡು ಮಾಲಕರು ಮರುಕ ಪಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಾವು ಕಂಬಳ ಕೂಟದಲ್ಲಿ ಇದ್ದೇವೆ. ಆದರೆ ಇದೇ ಮೊದಲ ಬಾರಿ ಈ ಸ್ಥಿತಿ ಆಗಿದೆ. ಈ ಬಗ್ಗೆ ಯಾರ ವಿರುದ್ಧವೂ ಪೊಲೀಸರಿಗೆ ದೂರು ನೀಡಿಲ್ಲ.

ತನ್ನ ಸ್ವಂತ ಮಕ್ಕಳಿಗಿಂತ ಜಾಸ್ತಿ ಪ್ರೀತಿಯಿಂದ ಸಾಕಿದ ಈ ಮೂಕ ಪ್ರಾಣಿಗಳಿಗೆ ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆಎನ್ನುವುದು ಅವರ ಅಂತರಾಳದ ಮಾತು.

ದೂಜೆ ಒಂದು ವಿಶೇಷ ರೀತಿ ಕೋಣವಾಗಿದ್ದು, ಅದು ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿತೆಂದರೆ ಅದಕ್ಕೆ ಗೊತ್ತಾಗುತ್ತದೆ. ಬ್ಯಾಂಡು ವಾದ್ಯ ಬಾರಿಸಿದಾಗ ತನ್ನ ತಲೆ ಅಲ್ಲಾಡಿಸಿ ತನ್ನ ಖುಷಿಯನ್ನು ಮಾಲಕರಿಗೆ ವ್ಯಕ್ತಪಡಿಸುತ್ತದೆ. ಆ ಸಂಭ್ರಮವನ್ನು ನೋಡುವುದೇ ಒಂದು ಖುಶಿ ಅಂತಾರೆ ಕಂಬಳ ಪ್ರೇಮಿಗಳು.

ಕೊಟ್ಟಿಗೆಯಲ್ಲಿ ಸಿಕ್ಕಿರುವ ಸಾಮಗ್ರಿಗಳು

ಗೆಲ್ಲುವ ತಾಕತ್ತು ಇದ್ದರೆ, ಕಂಬಳ ಗದ್ದೆಯಲ್ಲಿ ಸ್ಪರ್ಧೆ ಮಾಡಿ ಗೆಲ್ಲಬೇಕು. ಅದು ಬಿಟ್ಟು ವಾಮಾಚಾರದಂತಹ ಅಡ್ಡದಾರಿ ಹಿಡಿದು ಗೆಲ್ಲುವ ಪ್ರಯತ್ನ ಮಾಡುವುದು ನಿಜವಾಗಿಯೂ ಹೇಡಿಗಳ ಲಕ್ಷಣ.

ಇಂತಹ ಹೇಡಿಗಳಿಗೆ ತುಳುನಾಡಿನ ಸತ್ಯ ಧರ್ಮದ ದೈವ ದೇವರುಗಳು ಎಂದಿಗೂ ಒಳ್ಳೆಯದು ಮಾಡಲ್ಲ. ಒಂದಲ್ಲ ಒಂದು ದಿನ ಅದಕ್ಕೆ ಪ್ರತಿಫಲ ದೇವರು ಕೊಟ್ಟೇ ಕೊಡುತ್ತಾನೆ.

ದೂಜ- ಎರ್ಮುಂಡೆ ಮತ್ತೆ ಆರೋಗ್ಯ ಪಡೆದು ಕಂಬಳ ಕೂಟದಲ್ಲಿ ತನ್ನ ಗತ್ತು ಗೈರತ್ತಿನ ಓಟ ಮಾಡಿ ಇನ್ನೂ ಹತ್ತಾರು ಪದಕಗಳನ್ನು ಬಾಚಲಿ ಎನ್ನುವುದೇ ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here

Hot Topics