ಪುತ್ತೂರು : ಭಾರತೀಯ ಜನತಾ ಪಾರ್ಟಿಯ ಭೀಷ್ಮ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನಿಧನರಾಗಿದ್ದಾರೆ. 92 ವರ್ಷದ ರಾಮ್ ಭಟ್ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಪುತ್ತೂರಿನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಇತರ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಾಮ್ ಭಟ್ ಕರಾವಳಿಯಲ್ಲಿ ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿದವರಲ್ಲಿ ಪ್ರಮುಖರಾಗಿದ್ದರು.
ಕಳೆದ ಕೋವಿಡ್ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕರೆ ಮಾಡಿ ರಾಮ್ ಭಟ್ ಆರೋಗ್ಯ ವಿಚಾರಿಸಿದ್ದರು. ರಾಜ್ಯದಲ್ಲೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರಲ್ಲಿ ರಾಮ್ ಭಟ್ ಒಬ್ಬರಾಗಿದ್ದರು.
ರಾಜ್ಯದಲ್ಲಿದ್ದ ಇಬ್ಬರು ಬಿಜೆಪಿ ಶಾಸಕರಲ್ಲಿ ರಾಮ್ ಭಟ್ ಒಬ್ಬರಾಗಿದ್ದರು. ಕೆಲ ಸಮಯದ ಬಳಿಕ ಅದ್ಯಾಕೋ ರಾಜ್ಯ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡು ಸ್ವಾಭಿಮಾನಿ ವೇದಿಕೆ ಆರಂಭಿಸಿದ್ದರು.
ಜೊತೆಗೆ ಮಾಜಿ ಶಾಸಕ ಶಕುಂತಲಾ ಶೆಟ್ಟಿಯವರನ್ನು ಬಿಜೆಪಿ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಸಿದ್ದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಮತ್ತೆ ಬಿಜೆಪಿಗೆ ಮರಳಿದ್ದರು.
ರಾಮ್ ಭಟ್ ಅಲಗುವಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಅನೇಕ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಿಂಧ ಸಂತಾಪ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಉರಿಮಜಲು ರಾಮ ಭಟ್ ಅವರ ನಿಧನದಿಂದ ಪಕ್ಷ ಓರ್ವ ಹಿರಿಯ ನಾಯಕನನ್ನು ಕಳೆದು ಕೊಂಡಂತಾಗಿದೆ.
ಜನಸಂಘದ ಕಾಲದಿಂದಲೂ ರಾಜಕೀಯದಲ್ಲಿ ಅದರ್ಶಯುತ ಮೌಲ್ಯವನ್ನು ಪ್ರತಿಪಾದಿಸುತ್ತಾ ಸಾವಿರಾರು ಕಾರ್ಯಕರ್ತರಿಗೆ ಸ್ಪೂರ್ತಿ ಶಕ್ತಿಯಾಗಿದ್ದ ರಾಮ ಭಟ್ ಅವರು ತುರ್ತು ಪರಿಸ್ಥಿತಿ ವಿರೋಧ ಹೋರಾಡಿದ ದಿಟ್ಟ ನಾಯಕ.
ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿದ ರಾಮ ಭಟ್ ಅವರು ಪಕ್ಷದ ಜತೆಗೆ ಕಾರ್ಯಕರ್ತ ರನ್ನು ಬೆಳೆಸಿದವರು. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಿರುವುದು ನಮಗೆ ಹೆಮ್ಮೆಯ ವಿಷಯ. ರಾಮ ಭಟ್ ಅವರ ಆದರ್ಶ, ಜನಸೇವೆ, ಬಿಜೆಪಿಗೆ ಅವರು ನೀಡಿದ ಕೊಡುಗೆ ಚಿರಕಾಲ ಉಳಿಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತನ್ನ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.