ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರನ್ನು ಹೊಗಳುವ ಭರದಲ್ಲಿ ಕಾರ್ಯಕರ್ತನೊಬ್ಬ ಶಾಸಕರು ಕಚೇರಿಗೆ ಚೀಲದಲ್ಲಿ ಹಣ ತೆಗೆದುಕೊಂಡು ಬರುತ್ತಾರೆಂದು ಹೇಳಿಕೆ ನೀಡಿದ್ದು ಪೂಂಜಾರನ್ನು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ತನಿಖೆ ನಡೆಸಲು ಸಾಮಾಜಿಕ ಕಾರ್ಯಕರ್ತರೊಬ್ಬರು ಎಸಿಬಿ ಮತ್ತು ಈಡಿ ಗೆ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಳೆಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಎಂಬುವವರು ಶಾಸಕರ ಎದುರಿನಲ್ಲಿಯೇ ಹೊಗಳುವ ಭರದಲ್ಲಿ ದಿನದಲ್ಲಿ 10 ರಿಂದ 50 ಸಾವಿರ ಹಣ ಹಂಚುತ್ತಾರೆ.
ಇನ್ನೊಂದೆಡೆ ಪ್ರತಿದಿನ ಶಾಸಕರ ಕಚೇರಿ ‘ಶ್ರಮಿಕ’ಕ್ಕೆ ಚೀಲದಲ್ಲಿ ದುಡ್ಡು ತಂದು ಹಂಚುತ್ತಾರೆ ಎಂದು ಹೇಳಿದ್ದಾರೆ. ಮೊದಲು ಬಂಗೇರಿದ್ದರು, ಅವರು ಕಿಸೆ ಹರಿದು ಕೊಡುತ್ತಿದ್ದರು.
ಆದರೆ ಬಂಗೇರರಿಗಿಂತ 5 ಪಟ್ಟು ಹೆಚ್ಚು ಹಣ ಕೊಟ್ಟು ಸಹಕರಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ. ಈ ಹೇಳಿಕೆ ಶಾಸಕರನ್ನು ಸಂಕಷ್ಟಕ್ಕೆ ತಳ್ಳಿದೆ.
ಕೇವಲ ನಾಲ್ಕು ವರ್ಷದಿಂದ ಶಾಸಕರಾದ ಹರೀಶ್ ಪೂಂಜಾ ಲಕ್ಷಾಂತರ ರೂಪಾಯಿ ಹಂಚುವ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು.
ಇಡಿ, ಎಸಿಬಿ ಮತ್ತು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ ಮನೆ ಮೇಲೆ ದಾಳಿ ನಡೆಸುವಂತೆ ಮನವಿ ಮಾಡಿದ್ದೇವೆ.
ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧನ ಮಾಡಬೇಕು ಇಲ್ಲದಿದ್ದರೆ ಪ್ರಗತಿಪರ ಸಂಘಟೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಆರೋಪಿಸಿದ್ದಾರೆ. ಈ ಬಗ್ಗೆ ದೂರು ಸಹ ನೀಡಿದ್ದಾರೆ.