ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಮೃತದೇಹ..!
ನವದೆಹಲಿ: ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ದೆಹಲಿಯ ನಾರ್ತ್ ಅವೆನ್ಯೂನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರ್ಮಾ ಅವರು ಹಿಮಾಚಲ ಪ್ರದೇಶದ ಬಿಜೆಪಿ ಸಂಸದರಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದ್ದು, ಕಳೆದ ಆರು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಏನೋ ಎನ್ನುವ ಊಹಾಪೋಹಗಳಿವೆ.
ಅವರು ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಠಡಿ ಒಳಗಿನಿಂದ ಚಿಲಕ ಹಾಕಿತ್ತು. ಯಾವುದೇ ಆತ್ಮಹತ್ಯಾ ಚೀಟಿ ಪತ್ತೆಯಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮ್ಮ ಕರೆಗೆ ಶರ್ಮಾ ಅವರು ಸ್ಪಂದಿಸದೆ ಇದ್ದಾಗ ಗಾಬರಿಗೊಂಡ ಅವರ ಆಪ್ತ ಸಹಾಯಕ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಕೂಡಲೇ ಅವರ ಮನೆಗೆ ತೆರಳಿದ ಪೊಲೀಸರ ತಂಡ, ಬಾಗಿಲು ಒಡೆದು ಒಳ ಪ್ರವೇಶಿಸಿದೆ.
ಆಗ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.ಶರ್ಮಾ ಅವರು ದೆಹಲಿಯ ನಿವಾಸದಲ್ಲಿ ಒಂಟಿಯಾಗಿದ್ದರು.ರಾಮ್ ಶರ್ಮಾ ಅವರ ಪತ್ನಿ ಚಾರ್ ಧಾಮ್ ಯಾತ್ರಾ ಸ್ಥಳಕ್ಕೆ ತೆರಳಿದ್ದರು.
ಮರಣೋತ್ತರ ಪರೀಕ್ಷೆಯಿಂದಷ್ಟೇ ನಿಖರ ಮಾಹಿತಿ ಬಹಿರಂಗವಾಗಲಿದೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.ಶರ್ಮಾ ಅವರು 1958ರಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ್ದರು. 2014ರಲ್ಲಿ ಮೊದಲ ಬಾರಿಗೆ ಸಂಸತ್ ಗೆ ಆಯ್ಕೆಯಾಗಿದ್ದರು.
2019ರಲ್ಲಿ ಮಂಡಿಯಿಂದ 2ನೇ ಬಾರಿಗೆ ಚುನಾಯಿತರಾಗಿದ್ದರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲೂ ಅವರು ಕಾರ್ಯ ನಿರ್ವಹಿಸಿದ್ದರು.
ರಾಮ್ ಸ್ವರೂಪ್ ಶರ್ಮಾ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ್ ಶರ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.