ಮುಂಬೈ: ಬಿಜೆಪಿ ಯಾವ ಮುಸ್ಲಿಮನನ್ನು ಬೇಕಿದ್ದರೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕದಲ್ಲಿದ್ದ ಎಂಬಂತೆ ಬಿಂಬಿಸುತ್ತದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನಕ್ಕೆ ಸಂಬಂಧಿಸಿ ಮಾತನಾಡಿ, ನವಾಬ್ ಮಲಿಕ್ ಬಂಧನ ರಾಜಕೀಯ ಪ್ರೇರಿತವಾದದ್ದು, ಬಿಜೆಪಿಯವರ ಕಣ್ಣಿಗೆ ಯಾವುದೇ ಪಕ್ಷ ಮುಸ್ಲಿಮರು ಬೀಳುವುದೇ ತಪ್ಪು.
ಅವರು ದಾವೂದ್ ಇಬ್ರಾಹಿಂ ಜತೆ ಸಂಪರ್ಕದಲ್ಲಿದ್ದರು, ವ್ಯವಹಾರ ನಡೆಸಿದ್ದರು ಎಂಬಂತೆ ಬಿಂಬಿಸಿಬಿಡುತ್ತಾರೆ. ಇದೀಗ ನವಾಬ್ ಮಲ್ಲಿಕ್ಗೂ ಕೂಡ ದಾವೂದ್ ಇಬ್ರಾಹಿಂ ಜತೆ ಸಂಪರ್ಕವಿತ್ತು ಎಂದು ಹೇಳಿ ಅವರನ್ನು ಬಂಧಿಸಲಾಗಿದೆ. ಬಿಜೆಪಿಯವರು ರಾಜೀನಾಮೆ ಕೇಳುತ್ತಿದ್ದಾರೆ. ಈ ಮಧ್ಯೆ ನನ್ನದೊಂದು ಪ್ರಶ್ನೆಯಿದೆ.
ಇತ್ತೀಚೆಗೆ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಲಾಗಿತ್ತು. ಅವರು ಜಾಮೀನು ಪಡೆದು ವಾಪಸ್ ಬಂದಿದ್ದಾರೆ. ಹೀಗಿದ್ದಾಗ್ಯೂ ಅವರೇಕೆ ರಾಜೀನಾಮೆ ನೀಡಿಲ್ಲ. ಇದಕ್ಕೆ ಪ್ರಧಾನಿ ಮೋದಿ ವಿವರಣೆ ಕೊಡಬೇಕು ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರೊಂದಿಗೆ ನವಾಬ್ ಮಲಿಕ್ ಆಸ್ತಿ ವ್ಯವಹಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇ.ಡಿ.ತನಿಖೆ ಚುರುಕುಗೊಂಡಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ನವಾಬ್ ಮಲಿಕ್ರನ್ನು ಬಂಧಿಸಲಾಗಿದ್ದು, ಸದ್ಯ ಮಾರ್ಚ್ 7ರವರೆಗೂ ಅವರಿಗೆ ಇ.ಡಿ.ಕಸ್ಟಡಿ ವಿಧಿಸಲಾಗಿದೆ.