ಮಾರಕ ಹಕ್ಕಿ ಜ್ವರಕ್ಕೆ ಯುರೋಪ್ ತತ್ತರ : ಭಾರತಲ್ಲಿ ಕಟ್ಟೆಚ್ಚರ..!
ಪ್ಯಾರಿಸ್ : ಕೊರೊನಾದಿಂದ ವಿಶ್ವವೇ ತ್ತರಿಸಿ ಹೋಗಿದೆ. ಲಕ್ಷಾಂತರ ಜನ ಜೀವ ಕಳಕೊಂಡಿದ್ದಾರೆ ಇದರ ಬೆನ್ನಿಗೇ ಮತ್ತೊಂದು ಹೊಡೆತ ಮನು ಕುಲಕ್ಕೆ ಬಿದ್ದಿದೆ. ಮಾರಕ ಹಕ್ಕಿ ಜ್ವರ ಯುರೋಪಿನಲ್ಲಿ ವೇಗವಾಗಿ ಹರಡುತ್ತಿದೆ.
ರಷ್ಯಾ, ಕಜಕಿಸ್ತಾನ್ ಮತ್ತು ಇಸ್ರೇಲ್‌ಗಳನ್ನು ತೀವ್ರವಾಗಿ ಭಾದಿಸಿದ ನಂತರ ಫ್ರಾನ್ಸ್, ನೆದರ್ಲೆಂಡ್ಸ್, ಜರ್ಮನಿ, ಬ್ರಿಟನ್, ಬೆಲ್ಜಿಯಂ, ಡೆನ್ಮಾರ್ಕ್, ಐರ್ಲೆಂಡ್, ಸ್ವೀಡನ್‌ನಲ್ಲಿ ಕೋಳಿ ಜ್ವರದ ವೈರಸ್ ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಈ ವಾರ ಕ್ರೊರಾಟಿಯಾ, ಸ್ಲೊವೇನಿಯಾ ಮತ್ತು ಪೋಲೆಂಡ್‌ಗಳಲ್ಲಿಯೂ ಕೋಳಿ ಜ್ವರ ಕಾಣಿಸಿಕೊಂಡಿದೆ.
ಬಹುಪಾಲು ಪ್ರಕರಣಗಳು ವಲಸೆ ಕಾಡು ಪಕ್ಷಿಗಳಲ್ಲಿ ಕಾಣಿಸಿಕೊಂಡಿವೆ. ಆದರೆ, ಕೋಳಿ ಸಾಕಣೆ ಕೇಂದ್ರಗಳಲ್ಲಿಯೂ ವೈರಸ್ ಸಾಂಕ್ರಾಮಿಕಗೊಂಡಿದೆ. ಹೀಗಾಗಿ ಯೂರೋಪ್‌ನಾದ್ಯಂತ ಇಲ್ಲಿಯವರೆಗೆ ಕನಿಷ್ಠ 1.6 ದಶಲಕ್ಷ ಕೋಳಿ ಮತ್ತು ಬಾತುಕೋಳಿಗಳು ಸತ್ತಿವೆ. ಇಲ್ಲವೇ ಕೊಲ್ಲಲಾಗಿದೆ.
ಕೋಳಿ ಉದ್ಯಮವು ಹಿಂದಿನ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಲಕ್ಷಾಂತರ ಕೋಳಿಗಳನ್ನು ಕೊಂದಿದೆ. ಹೀಗಾಗಿ ಉದ್ಯಮವು ಗಮನಾರ್ಹ ಆರ್ಥಿಕ ನಷ್ಟವನ್ನು ಕಾಣುತ್ತಿದೆ.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ರಫ್ತು ಮಾಡುವ ಯುರೋಪಿನ ಅತಿ ದೊಡ್ಡ ರಾಷ್ಟ್ರ ನೆದರ್ಲೆಂಡ್‌ನಲ್ಲಿ ಸುಮಾರು 5,00,000 ಕೋಳಿಗಳು ವೈರಸ್‌ನಿಂದ ಸತ್ತಿವೆ, ಅಥವಾ ಕೊಲ್ಲಲಾಗಿದೆ. ಈ ವಾರ ಪೋಲೆಂಡ್‌ನ ಕೋಳಿ ಸಾಕಣೆ ಕೇಂದ್ರದಲ್ಲಿ 9,00,000 ಕೋಳಿಗಳು ಸತ್ತಿವೆ ಎಂದು ಅಲ್ಲಿನ ಸಚಿವಾಲಯ ತಿಳಿಸಿದೆ.
‘ಕೋಳಿ ಸಾಕಣೆ ಕೇಂದ್ರಗಳಲ್ಲಿ ಪ್ರಸರಣೆ ಅಪಾಯ ಮತ್ತು ಕಾಡು ಪಕ್ಷಿಗಳಲ್ಲಿನ ಸೋಂಕು ಪ್ರಕರಣಗಳು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿದೆ. ಏಕೆಂದರೆ ಯುರೋಪಿನಲ್ಲಿ ಪಕ್ಷಿ ಜ್ವರದ ವಿವಿಧ ವೈರಸ್‌ಗಳು ದೊಡ್ಡಪ್ರಮಾಣದಲ್ಲಿ ಕಾಣಿಸಿಕೊಂಡಿವೆ’ ಎಂದು ಜರ್ಮನಿಯ ಪ್ರಾಣಿ ರೋಗ ಸಂಶೋಧನಾ ವಿಭಾಗದ ವಕ್ತಾರ ಹೇಳಿದ್ದಾರೆ.