BELTHANGADY
ಬೆಳ್ತಂಗಡಿ: ರಿಕ್ಷಾಕ್ಕೆ ಬೈಕ್ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸಾವು
ಬೆಳ್ತಂಗಡಿ: ರಿಕ್ಷಾಕ್ಕೆ ಬೈಕ್ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸಮೀಪದ ಮಡಂತ್ಯಾರ್ ಪಾರೆಂಕಿ ರಸ್ತೆಯಲ್ಲಿ ನಡೆದಿದೆ.
ಮಡಂತ್ಯಾರ್ ನ ಖಾಸಗಿ ಕಾಲೇಜ್ ನಲ್ಲಿ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಶಿವಪ್ರಸಾದ್ ಎಂಬಾತ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಪಾರೆಂಕಿ ವಸಂತ ನಾಯಕ್ ಎಂಬವರ ಪುತ್ರ ಶಿವಪ್ರಸಾದ್ ಎಂಬವರು ಕಾಲೇಜಿನಿಂದ ನಿನ್ನೆ ಸಂಜೆ 4.30ರ ಸುಮಾರಿಗೆ ಮನೆಗೆ ತೆರಳುತಿದ್ದಾಗ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗಲಾಯಿತಾದರೂ ಮಧ್ಯರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
BANTWAL
ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಪಲ್ಟಿ ; ಇಬ್ಬರಿಗೆ ಗಾಯ
ಪುಂಜಾಲಕಟ್ಟೆ; ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಮುಗುಚಿ ಕೆಳಗೆ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಆರ್‌ಎಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಬರುತ್ತಿರುವಾಗ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಮತ್ತೋರ್ವ ಸಿಬ್ಬಂದಿ ಸಾಂತಪ್ಪ ನಾಯಕ್‌ರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
BELTHANGADY
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ
ಬೆಳ್ತಂಗಡಿ: ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ವತಿಯಿಂದ ಹಮ್ಮಿಕೊಳ್ಳಲಾದ ಹೈಸ್ಕೂಲ್ ವಿಭಾಗದ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಗಾಯನ ಸ್ಪರ್ಧೆಯ ಇಬ್ಬರು ತೀರ್ಪುಗಾರರಲ್ಲಿ ಸುರೇಶ್ ಎ.ಡಿ ಎಂಬುವರ ಒಬ್ಬರಾಗಿದ್ದರು. ಇವರು ಸುಗಮ ಸಂಗೀತ ತರಗತಿಯನ್ನು ಕೂಡಾ ನಡೆಸುತ್ತಿದ್ದು, ಮೊನ್ನೆ ನಡೆದ ಗಾಯನ ಸ್ಪರ್ಧೆಯಲ್ಲಿ ಪಕ್ಷಪಾತೀಯ ಧೋರಣೆಯನ್ನು ಅನುಸರಿಸುವ ಮೂಲಕ ಸ್ಪರ್ಧೆಗೆ ಕಳಂಕವನ್ನು ತಂದಿದ್ದಾರೆ. ತನ್ನ ಮಗಳಿಗೆ ಪ್ರಥಮ ಹಾಗೂ ತನ್ನ ಸಂಗೀತ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಮತ್ತು ಮೂರನೇ ಬಹುಮಾನ ನೀಡಿದ್ದಾರೆಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ಪ್ರಬಂಧಕರಲ್ಲಿ ಮಾತನಾಡಿಸಿದಾಗ ಅವರು, ಉಡಾಫೆಯಿಂದ ವರ್ತಿಸಿ ಕಾಲ್ ಕಟ್ ಮಾಡಿದ್ದಾರೆ. ಕಲೆ,ಚಿತ್ರಕಲೆ,ಸಾಹಿತ್ಯ, ಸಂಗೀತ, ಪಂದ್ಯಾವಳಿ ಮೊದಲಾದವುಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆತ್ತವರಾಗಲಿ,ಮನೆಯವರಾಗಲಿ ಇಲ್ಲವೇ ಕುಟುಂಬದವರಾಗಲಿ ಅಥವಾ ಅವರ ತರಬೇತುದಾರರಾಗಲಿ,ಗುರುಗಳಾಗಲಿ ತೀರ್ಪುಗಾರರಾಗುವಂತಿಲ್ಲ ಇದು ಸ್ಪರ್ಧೆಯ ನಿಯಮಾವಳಿ. ಹೀಗಿರುವಾಗ ಮಗಳು ಹಾಗೂ ತನ್ನ ಶಿಷ್ಯಂದಿರುವ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿದ್ದು ತಪ್ಪು ಮತ್ತು ಈ ಬಗ್ಗೆ ಆಯೋಜಕರಲ್ಲಿ ಮಾತನಾಡಿಸಿದಾಗ ಅವರು ಉಡಾಫೆಯಿಂದ ವರ್ತಿಸಿದ್ದು ಕೂಡಾ ಸರಿಯಲ್ಲ ಎಂದು ಆರೋಪಿಸಲಾಗಿದೆ.
ಜೀವ ವಿಮಾ ಕಂಪನಿ ಭಾರತದ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಪಬ್ಲಿಕ್ ಸೆಕ್ಟರ್ ಆಗಿರುತ್ತದೆ. ಇಂತಹ ಕಂಪನಿಯ ಪ್ರಬಂಧಕರು ತಾರತಮ್ಯ ನೀತಿಯನ್ನು ಅನುಸರಿಸುವುದು ಮತ್ತು ಸಾರ್ವಜನಿಕರಲ್ಲಿ ಉಡಾಫೆಯಿಂದ ವರ್ತಿಸುವುದು ಕಂಪನಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಹಾಗಾಗಿ ಕಂಪನಿಯ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
BELTHANGADY
ರಾಯಚೂರಿನಲ್ಲಿ ಶಾಸಕ ಹರೀಶ್ ಪೂಂಜಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್ ಸಚಿವ, ಶಾಸಕರ ಫೋಟೋಗಳು!
ರಾಯಚೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರ ಫೋಟೋಗಳು ರಾರಾಜಿಸಿವೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿ ಮಾನ್ವಿಯಲ್ಲಿ ಹಲವು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಸಚಿವ ಎನ್.ಎಸ್.ಬೋಸರಾಜು ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ್, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಾಕಲಾಗಿದೆ.
ಮಾನ್ವಿ ಪಟ್ಟಣ ಹಾಗೂ ರಾಯಚೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಹರೀಶ್ ಪೂಂಜ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ.