ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಸವಾರನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರೀ ಪಕ್ಕದ ತಿರುವು ರಸ್ತೆಯಲ್ಲಿ ನಡೆದಿದೆ.
ಮುಂಡಾಜೆ ಸಮೀಪದ ಅಣಿಯೂರಿನ ಪ್ರದೀಪ ಗೌಡ (22) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಅಣಿಯೂರಿನ ನೋಣಯ್ಯ ಗೌಡ ಎಂಬವರ ಪುತ್ರರಾಗಿರುವ ಪ್ರದೀಪ ಅವರು ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ವಸ್ತುವೊಂದನ್ನು ನೀಡಲು ಅತ್ತ ತೆರಳುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.
ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು ಹಿಂದೆ ಕೂಡಾ ಇಲ್ಲಿ ಅಪಘಾತ ಮತ್ತು ಪ್ರಾಣ ಹಾನಿ ಸಂಭವಿಸಿದೆ.
ಪ್ರದೀಪ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎಡ ಭಾಗದಲ್ಲಿರುವ ಮನೆಯ ಗೇಟಿನಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿಹೊಡೆದಿದೆ.
ಅವರು ತಂದಿರುವ ಸಾಮಾನಿನ ಪೊಟ್ಟಣ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಅಪಘಾತ ಆದ ತಕ್ಷಣ ಸ್ಥಳೀಯರು ಅವರನ್ನು ಉಜಿರೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಸಾಗಿಸುವ ಯತ್ನ ನಡೆಸಿದರಾದರೂ ದಾರಿ ಮಧ್ಯೆ ಪ್ರದೀಪ್ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.