ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳದ ಮದರಸಾದಿಂದ ಮನೆಗೆ ತೆರಳುತ್ತಿದ್ದ ಬಾಲಕನಿಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣ ತಿರುವು ಪಡೆದಿದ್ದು ಇದು ಬಾಲಕ ಕಟ್ಟಿದ್ದ ಕಟ್ಟುಕಥೆ ಎಂದು ಇದೀಗ ಪೊಲೀಸ್ ಇಲಾಖೆ ನಡೆಸಿದ ತನಿಖೆಯಿಂದ ಬಯಲಿಗೆ ಬಂದಿದೆ.
ತಾನೇ ತನ್ನ ಬಟ್ಟೆ ಹರಿದುಕೊಂಡು ಈ ರೀತಿ ಡ್ರಾಮಾ ಮಾಡಿರುವುದು ತನಿಖೆಯಿಂದ ಸ್ಪಷ್ಟವಾಗಿದೆ. ಜೂನ್ 27 ರಂದು ಮದರಸಾ ಬಿಟ್ಟು ಮನೆಗೆ ತೆರಳುತ್ತಿದ್ದವನ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ಕಾಟಿಪಳ್ಳ ಆರನೇ ಬ್ಲಾಕ್ನಲ್ಲಿರುವ ತೌಯಿಬಾ ಮಸೀದಿಯ 6 ನೇ ತರಗತಿಯ ವಿದ್ಯಾರ್ಥಿ ಆರೋಪ ಮಾಡಿದ್ದ.
ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಬಾಲಕ ಕಟ್ಟುಕಥೆ ಸೃಷ್ಟಿಸಿರುವುದು ಸಮಗ್ರ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಮದರಸಾದಿಂದ ತೆರಳುತ್ತಿದ್ದ ಬಾಲಕನಿಗೆ ಹಲ್ಲೆ ಮಾಡಿದ ವಿಚಾರ ಆತಂಕಕ್ಕೆ ಕಾರಣವಾಗಿತ್ತು.
ಇದನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಆ ಬಾಲಕನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ತಾನು ಓದುವುದರಲ್ಲಿ ಹಿಂದೆ ಇರುವುದು, ಶಾಲೆಯಲ್ಲಿ ಸ್ನೇಹಿತರಿಲ್ಲದಿರುವುದು, ಕಪ್ಪಗಿರುವ ಕಾರಣ ಸ್ನೇಹಿತರು ದೂರ ಮಾಡಿರುವುದು, ಮನೆಯಲ್ಲಿ ಬಡತನ ಇದ್ದು, ತಂದೆ ತಾಯಿ ಕಷ್ಟಪಟ್ಟು ಓದಿಸಿದರೂ ಓದಲು ಆಗದೆ ಇರುವುದು ಹಾಗೂ ಸೈಕಲ್ ಇಲ್ಲದೆ ಸ್ನೇಹಿತರು ಹತ್ತಿರ ಬರುವುದಿಲ್ಲ ಎಂಬೆಲ್ಲ ಕಾರಣದಿಂದ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.
ಈ ಬಾಲಕನನ್ನು ಚೈಲ್ಡ್ ವೆಲ್ಫೇರ್ ಕಮಿಟಿ ಮತ್ತು ವೈದ್ಯರ ಮುಂದೆ ಹೇಳಿಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ. .