ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನ ತೋಟ ಬೆಂಗ್ರೆಯಲ್ಲಿ 1 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ತೋಟ ಬೆಂಗ್ರೆಯ ಬಬ್ಬರ್ಯ ದೈವಸ್ಥಾನದಿಂದ ದಕ್ಷಿಣ ಬೀಚ್ ವರೆಗಿನ ರಸ್ತೆಯ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಕೆಲ ಸಮಯದಿಂದ ಸಾರ್ವಜನಿಕರ ಬೇಡಿಕೆಯಿತ್ತು.
ಆ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಬೆಂಗ್ರೆ ಪರಿಸರದಲ್ಲಿ ಈಗಾಗಲೇ ಸಾರ್ವಜನಿಕರ ಬೇಡಿಕೆಯ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗ್ರೆ ಪರಿಸರಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ.
ಮೀನುಗಾರಿಕೆಯನ್ನೇ ಅವಲಂಬಿಸಿರುವ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಬೆಂಗ್ರೆ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡು ಕೆಲವೇ ವರ್ಷಗಳಾಗಿವೆ. ಆ ನಿಟ್ಟಿನಲ್ಲಿ ಈ ಭಾಗಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ.
ಶಾಸಕರ ವಿಶೇಷ ಕಾಳಜಿಯಿಂದ ಇಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನ ಮಾಡುತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸುನಿತಾ, ಸ್ಥಳೀಯ ಮುಖಂಡರಾದ ಗಂಗಾಧರ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಕೇಶವ ಕರ್ಕೇರ, ಶಶಿಕುಮಾರ್, ಮೋಹನ್ ಬೆಂಗ್ರೆ, ಲತೀಶ್ ಪುತ್ರನ್, ಸಂಜಯ್ ಸುವರ್ಣ, ಮಹೇಶ್ ವಿ.ಕೆ, ಸುಂದರ್ ಸಾಲ್ಯಾನ್, ಸ್ಥಳೀಯರು, ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.